ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 2ನೇ ದಿನದ ಅತಿರುದ್ರ ಮಹಾಯಾಗ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರ ಬುಧವಾರದಂದು ಋತ್ವಿಜರಿಂದ ಪೂಜೆಯೊಂದಿಗೆ ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿವೆ.

ಅತಿರುದ್ರ ಮಹಾಯಾಗದ ಎರಡನೇ ದಿನವಾದ ಫೆಬ್ರವರಿ 23, 2023 ರ ಗುರುವಾರದಂದು ಮುಂಜಾನೆ ಸಮಯದಲ್ಲಿ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ, ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ತಿಲಹೋಮ, ಪವಮಾನ ಹೋಮ, ಕೂಷ್ಮಂಡ ಹೋಮ, ನವಕಪ್ರಧಾನ ಹೋಮಪುರಸ್ಸರ ನಾವಕಲಶ ಅಭಿಷೇಕ, ವಟು ಆರಾಧನೆ, ಪ್ರಸನ್ನಪೂಜೆ, ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಏಕ ಕಲಶಾಭಿಷೇಕ ಮತ್ತು ಸಾಯಂಕಾಲ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನೆರವೇರಲಿವೆ.

ಸಂಜೆ 5 ರಿಂದ ಬೆಂಗಳೂರಿನ ಬಾಲ ವಾಗ್ಮಿ ಕು. ಹಾರಿಕಾ ಮಂಜುನಾಥ್ ಅವರಿಂದ ಉಪನ್ಯಾಸ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ರಿಂದ 8 ಗಂಟೆಯವರೆಗೆ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿಧುಷಿ ಉಮಾಶಂಕರಿ ಉದಯಶಂಕರ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ಮತ್ತು ರಾತ್ರಿ 8 ರಿಂದ ಹರಿದಾಸರಾದ ಶ್ರೀಮತಿ ಪ್ರತಿಮಾ ಕೋಡೂರು ಮತ್ತು ಬಳಗದವರಿಂದ “ದಕ್ಷ ಯಜ್ಞ” ಹರಿಕಥೆ ನಡೆಯಲಿದೆ.

ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ಅತಿರುದ್ರ ಮಹಾಯಾಗ ಮಾರ್ಚ್ 05, 2023 ರವರೆಗೆ ನಡೆಯಲಿದೆ. 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ ನಿರಂತರವಾಗಿ ಯಾಗ ನಡೆಯಲಿವೆ.