ಬಜರಂಗದಳ ನಿಷೇಧ ಕುರಿತು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಕಿಡಿ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಬಜರಂಗದಳ ನಿಷೇಧ ಕುರಿತು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರು ಕಿಡಿ ಕಾರಿದ್ದು, ನಿಷೇಧಿತ ಪಿಎಫ್ಐ ಜೊತೆ ಬಜರಂಗದಳವನ್ನು ಹೋಲಿಕೆಗೆ ತಕ್ಕ ಪ್ರತಿಫಲ ಅನುಭವಿಸಲಿದೆ ಎಂದು ಹೇಳಿದ್ದಾರೆ. ಜನರಿಂದ ತಿರಸ್ಕಾರಗೊಂಡಿರುವ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಓಲೈಕೆ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ. ದೇಶಪ್ರೇಮ ಹಾಗೂ ದೇಶದ್ರೋಹಿಗಳ ನಡುವೆ ವ್ಯತ್ಯಾಸ ತಿಳಿಯದ ಕಾಂಗ್ರೆಸ್ ಬಜರಂಗದಳವನ್ನು ಉಗ್ರ ಸಂಘಟನೆಯೊಂದಿಗೆ ಹೋಲಿಸುತ್ತಿದೆ ಎಂದರು. ತನ್ನ ಸರಕಾರದ ಅವಧಿಯಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸು ರದ್ದುಗೊಳಿಸಿದ್ದ ಕಾಂಗ್ರೆಸ್ ಇಂದು ಪಿಎಫ್ಐ ನಿಷೇಧವಾಗಿರುವ ಬಳಿಕ ಕ್ರಮ ಕೈಗೊಳ್ಳುವ ಕುರಿತು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಕಾಂಗ್ರೇಸಿನ ಇಂತಹ ನಾಟಕಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಕಿತ್ತೊಗೆಯುವ ಕಾಲ ಬಂದಿದೆ ಎಂದರು.