ಬಜೆಟ್‌ನಲ್ಲಿ 7ನೇ ವೇತನ ಆಯೋಗದ ವರದಿಗಾಗಿ ಹಣ ಮೀಸಲಿಟ್ಟಿದ್ದೇವೆ : ಸಿಎಂ ಬೊಮ್ಮಯಿ

7ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಅನುಷ್ಠಾನ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಭರವಸೆ ನೀಡಿದರು. ಹುಬ್ಬಳ್ಳಿಯಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಸವರಾಜ ಬೊಮ್ಮಾಯಿ, “ಈ ವರ್ಷದ ಬಜೆಟ್‌ನಲ್ಲಿ ನಾವು 7ನೇ ವೇತನ ಆಯೋಗದ ವರದಿಗಾಗಿಯೇ ಹಣ ಮೀಸಲಿಟ್ಟಿದ್ದೇವೆ. ಆಯೋಗದ ಮಧ್ಯಂತರ ವರದಿ ಪಡೆದುಕೊಂಡ ನಂತರ ಅದನ್ನು ಅನುಷ್ಠಾನ ಮಾಡುತ್ತೇವೆ” ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗದ ಜಾರಿಗೆ ತರುವುದಾಗಿ ಮತ್ತೊಮ್ಮೆ ಪುನರುಚ್ಚರಿಸಿದ್ದು, ಬುಧವಾರ ನಡೆಯುವ ಸರ್ಕಾರಿ ನೌಕರರ ಪ್ರತಿಭಟನೆ ತಡೆಯಲು ಮುಂದಾಗಿದ್ದಾರೆ. “ಸರ್ಕಾರಿ ನೌಕರರು 7ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಅದನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಸರ್ಕಾರಿ ನೌಕರರ ಒತ್ತಾಯವನ್ನು ನಮ್ಮ ಸರ್ಕಾರ ಒಪ್ಪಿದೆ. ಈ ಕೂಡಲೇ ನಾವು ಆಯೋಗ ಮಧ್ಯಂತರ ವರದಿ ಪಡೆದು ಅದರ ಅನುಷ್ಠಾನಕ್ಕೆ ಸಿದ್ಧರಿದ್ದೇವೆ” ಎಂದು ಭರವಸೆಯ ಮಾತುಗಳನ್ನಾಡಿದರು.

ಸರ್ಕಾರಿ ನೌಕಕರಿಂದ ಪ್ರತಿಭಟನೆ

ವೇತನ ಪರಿಷ್ಕರಣೆಗೆ ಆಗ್ರಹಿಸಿ ಸರ್ಕಾರಿ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಜತೆಗೆ ಹೊಸ ಪಿಂಚಣಿ ನೀತಿ (ಎನ್‌ಪಿಎಸ್‌) ರದ್ಧತಿಗೆ ಆಗ್ರಹಿಸಿ 5.11 ಲಕ್ಷ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿಯಲಿದ್ದಾರೆ. ಇದರಿಂದ ಸರ್ಕಾರಿ ಶಾಲೆ-ಕಾಲೇಜುಗಳು ಸೇರಿದಂತೆ ಅನೇಕ ಕಚೇರಿಗಳಿಗೆ ಬೀಗ ಬೀಳಲಿದೆ. ಈ ಮೂಲಕ ಸಾರ್ವಜನಿಕರ ಪಾಲಿಗೆ ನಾಳೆ ‘ಸರ್ಕಾರಿ ರಜಾ ದಿನ’ ಎನ್ನಲಾಗಿತ್ತು. ಆದರೆ, ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗ ಜಾರಿಯ ಭರವಸೆ ನೀಡುವ ಮೂಲಕ ನೌಕರರ ಪ್ರತಿಭಟನೆ ತಪ್ಪಿಸುವ ಯತ್ನ ಮಾಡಿದ್ದಾರೆ.

Related Posts

Leave a Reply

Your email address will not be published.