ಯೋಗೇಶ್ವರ ಮಠ ಕಾಲಭೈರವ ದೇವಸ್ಥಾನ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ

ಮಂಗಳೂರು: ಫೆ.3 ರಿಂದ 6 ರವರೆಗೆ ನಡೆಯಲಿರುವ ನಗರದ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ ಇಂದು ನೆರವೇರಿತು.ಚಾಲನೆ ನೀಡಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಯೋಗೇಶ್ವರ ಮಠಾಧೀಶ ಶ್ರೀ ರಾಜಯೋಗಿ ನಿರ್ಮಲನಾಥಜೀ ಮಾರ್ಗದರ್ಶನದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ನೆರವೇರಲಿದೆ. ಕದ್ರಿ ಜಾತ್ರೋತ್ಸವದ ಈ ಸುಸಂದರ್ಭದಲ್ಲಿ ಚಪ್ಪರ ಮುಹೂರ್ತ ನೆರವೇರಿದೆ. ಬ್ರಹ್ಮಕಲಶೋತ್ಸವ ಪೂರ್ವಭಾವಿ ಕೆಲಸಗಳು ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ನವೀಕೃತಗೊಂಡಿರುವ ಗುಡಿ, ಮಂದಿರದ ದ್ವಾರ ಉದ್ಘಾಟನೆಗೆ ಸಜ್ಜುಗೊಂಡಿದೆ. ಈ ಪ್ರದೇಶದಲ್ಲಿ ಇಂಟರ್‍ಲಾಕ್ ಆಳವಡಿಕೆಗೆ ಪಾಲಿಕೆಯ ಸ್ಥಳೀಯ ಸದಸ್ಯ ಮನೋಹರ್ ಶೆಟ್ಟಿ ಅವರು ಬೇಡಿಕೆಯನ್ನು ನೀಡಿದ್ದು, 15 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಈ ಎಲ್ಲಾ ಕೆಲಸಗಳು ಫೆ.3 ರ ಒಳಗೆ ಪೂರ್ಣಗೊಳ್ಳಲಿದೆ ಎಂದರು.

ಕಳೆದ ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಲ್ಲಿಗೆ ಬೇಟಿ ನೀಡಿದ ಸಂದರ್ಭ ಈ ಮಠಕ್ಕೆ 1 ಕೋಟಿ ರೂ. ಅನುದಾನವನ್ನು ಒದಗಿಸುವಂತೆ ಕೇಳಿಕೊಂಡಿದ್ದರು. ಅದರಂತೆ ಈಗಾಗಲೇ 50 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಈ ಅನುದಾನದ ಹಣ ಇಲ್ಲಿಯ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಲಿದ್ದು, ಶೀಘ್ರವೇ ಉಳಿದ ಮೊತ್ತ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹಿತ ಹಲವು ಮಂದಿ ಗಣ್ಯರು ಪಾಲ್ಗೊಳ್ಳುವರು ಎಂದರು.ಸಹ ಮಠಾಧಿಪತಿ ಶ್ರೀ ಉಮೇಶ್ ನಾಥ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ, ಸತೀಶ್ ಜೋಗಿ ಮಾಲೆಮಾರ್, ಪ್ರಧಾನ ಸಲಹೆಗಾರ ಹರಿನಾಥ್ ಜೋಗಿ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಮಂಗಳಾದೇವಿ, ನಗರ ಪಾಲಿಕೆ ಸದಸ್ಯರಾದ ಶಕೀಲಾ ಕಾವ, ಮನೋಹರ ಶೆಟ್ಟಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿಯ ಅಧ್ಯಕ್ಷರು, ಸದಸ್ಯರು, ಜೋಗಿ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.