ಕರಾವಳಿಗೂ ಬಾಲಿವುಡ್ ನಟ ಸೋನು ಸೂದ್ ಸಹಾಯ ಹಸ್ತ: ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಕ್ಷಿಪ್ರ ಆಮ್ಲಜನಕ ಕೇಂದ್ರ
ಮಂಗಳೂರು:ಕೋವಿಡ್ ಕ್ಲಿಷ್ಟಕರ ಸಂದರ್ಭದಲ್ಲಿ ಅತೀ ಅಗತ್ಯವಾದ ಆಕ್ಸಿಜನ್ ಹಾಗೂ ಅಗತ್ಯ ವೈದ್ಯಕೀಯ ನೆರವಿನ ಏರ್‌ಲಿಫ್ಟ್ ಮೂಲಕ ದೇಶದಲ್ಲಿ ಗಮನ ಸೆಳೆದಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ದ.ಕ. ಜಿಲ್ಲೆಯನ್ನೊಳಗೊಂಡು ಕರಾವಳಿಗೂ ಸಹಾಯದ ಹಸ್ತ ಚಾಚಿದ್ದಾರೆ.
ಸೋನು ಸೂದ್ ಚಾರಿಟೆಬಲ್ ಫೌಂಡೇಶನ್ ವತಿಯಿಂದ ಕರ್ನಾಟಕದ 4ನೇ ಕ್ಷಿಪ್ರ ಆಮ್ಲಜನಕ ಕೇಂದ್ರ ಕ್ಕೆ ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಇಂದು ಚಾಲನೆ ನೀಡಲಾಯಿತು.ದ.ಕ. ಜಿಲ್ಲೆ ಮಾತ್ರವಲ್ಲದೆ, ಉಡುಪಿ ಹಾಗೂ ಮಲ್ಪೆ ಸೇರಿದಂತೆ ಮಂಗಳೂರು ಕೇಂದ್ರದಿಂದ ಸುಮಾರು 80 ಕಿ.ಮೀ. ವ್ಯಾಪ್ತಿಯೊಳಗೆ ಈ ಕೇಂದ್ರದಿಂದ ತುರ್ತು ಸಂದರ್ಭದಲ್ಲಿ ಆಮ್ಲಜನಕ ಪೂರೈಸಲಾಗುವುದು.
7000 ಲೀಟರ್ ಹಾಗೂ 1300ರಿಂದ 1400ಲೀಟರ್ ಸಾಮರ್ಥ್ಯದ ತಲಾ 10ರಂತೆ 20 ಆಕ್ಸಿಜನ್ ಸಿಲಿಂಡರ್‌ಗಳು ಈ ಕೇಂದ್ರದಲ್ಲಿ ಸದ್ಯ ಲಭ್ಯವಿದೆ. ಅಗತ್ಯವಿದ್ದಲ್ಲಿ ಇನ್ನಷ್ಟು ಆಕ್ಸಿಜನ್ ಸಿಲಿಂಡರ್‌ಗಳನ್ನು ಏರ್‌ಲಿಫ್ಟ್ ಮಾಡಲಾಗುವುದು ಎಂದು ಸೋನು ಸೂದ್ ಸ್ವಾಗ್ ಇಆರ್‌ಟಿ ತಂಡದ ಅಮಿತ್ ಪುರೋಹಿತ್ ಮಾಹಿತಿ ನೀಡಿದರು. ಈ ಸಂದರ್ಭ ಸೂದ್ ಚಾರಿಟಿ ಫೌಂಡೇಶನ್‌ನ ಅಜಯ್ ಪ್ರತಾಪ್ ಸಿಂಗ್, ಮಂಗಳೂರು ಸೆಂಟ್ರಲ್ ರೈಲ್ವೇ ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್, ಜಂಕ್ಷನ್‌ರೈಲ್ವೇ ನಿಲ್ದಾಣದ ಸರ್ಕಲ್ ಇನ್ಸ್‌ಪೆಕ್ಟರ್ ಅಜಯ್ ಕುಮಾರ್, ಈಶ್ವರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.