ಗೌರಿ ಕೊರಗ ಅವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರಧಾನ

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ಮಹರ್ಷೀ ವಾಲ್ಮೀಕಿ ಪ್ರಶಸ್ತಿ ಪ್ರಧಾನ ಸಮಾರಂಭವು ಇಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

2020 ಹಾಗೂ 2021 ರ ಸಾಲಿನಲ್ಲಿ ಒಟ್ಟು 11 ಮಂದಿಯನ್ನು ಈ ಪ್ರಶಸ್ತಿಗೆ ಸರಕಾರ ಆಯ್ಕೆ ಮಾಡಿತ್ತು. ಮೈಸೂರು ವಿಭಾಗದಿಂದ ಪ್ರಶಸ್ತಿಗೆ ಆಯ್ಕೆಯಾಗಿದ್ದ ಉಡುಪಿ ಜಿಲ್ಲೆಯ ಗೌರಿ ಕೊರಗ ಕೆಂಜೂರು ಅವರಿಗೆ ಸೇರಿದಂತೆ ಪ್ರಶಸ್ತಿ ಪುರಸ್ಕøತರಿಗೆ ಮುಖ್ಯಮಂತ್ರಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಸ್ತಿಯು 20 ಗ್ರಾಮ್ ಚಿನ್ನದ ಪದಕ ಹಾಗೂ 5 ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು, ಇಲಾಖೆಯ ನಿರ್ದೇಶಕ ಪಿ.ಎಸ್. ಕಾಂತರಾಜು, ದಾವಣಗೆರೆ ವಾಲ್ಮೀಕಿ‌ ಗುರು ಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ‌ ಉಪಸ್ಥಿತರಿದ್ದರು.

ಕೊರಗ ಸಮುದಾಯದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸಿದ ಹಾಗೂ ಸಮುದಾಯದ ಮೂಲಭೂತ ಅವಶ್ಯಕತೆಗಳಿಗಾಗಿ ಅನೇಕ ಚಳವಳಿ, ಕಾರ್ಯಕ್ರಮಗಳನ್ನು ರೂಪಿಸಿದ ಕೊರಗ ಸಮುದಾದಯದ ನಾಯಕಿ ಬ್ರಹ್ಮಾವರ ಕೆಂಜೂರಿನ ಗೌರಿ ಕೊರಗ ಅವರು ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
2000 ನೇ ವರ್ಷದಲ್ಲಿ ನಡೆದ ಕೊರಗ ಸಮುದಾಯದವರಿಗೆ ಭೂಮಿ ಮಂಜೂರಾತಿಗಾಗಿ ಚಳವಳಿಯಲ್ಲಿ ಗೌರಿ ಅವರು ಮುಂಚೂಣಿಯಲ್ಲಿ ನಿಂತು ಹೋರಾಟದಲ್ಲಿ ಭಾಗವಹಿಸಿದ್ದರು. ಅಜಲು ಪದ್ಧತಿ ನಿರ್ಮೂಲನೆಗಾಗಿ ನಡೆದ ಅಜಲು ವಿರೋಧಿ ಚಳವಳಿಯಲ್ಲಿ ಗೌರಿಯವರು ಸಕ್ರೀಯವಾಗಿ ಭಾಗಿಯಾಗಿದ್ದರು. ಕೊರಗ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಸಮುದಾಯದ ಜನರ ಆರೋಗ್ಯ ಸುಧಾರಣೆಗಾಗಿ ಪೌಷ್ಟಿಕಾಂಶದ ಯೋಜನೆಯ ಅನುಷ್ಠಾನಕ್ಕಾಗಿ ಗೌರಿ ಅವರು ದುಡಿದಿದ್ದರು. , ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ, ರಾಜ್ಯ ಬುಡಕಟ್ಟು ಅರಣ್ಯ ಕಾಯ್ದೆ ಸಮಿತಿ ಸದಸ್ಯರಾಗಿ , ಗ್ರಾಮ ಪಂಚಾಯತ್ ಸದಸ್ಯರಾಗಿ ಗೌರಿ ಕೊರಗ ಅವರು ಸೇವೆ ಸಲ್ಲಿಸಿದ್ದಾರೆ. ತನಗೆ ಸರಕಾರದಿಂದ ಮಂಜೂರಾದ 1 ಎಕ್ರೆ ಭೂಮಿಯಲ್ಲಿ ಗೌರಿ ಅವರು ಅಡಿಕೆ, ತೆಂಗು , ಬಾಳೆ , ಗೇರು ಬೆಳೆದು ಯಶಸ್ವಿಯಾಗಿದ್ದಾರೆ.ಪ್ರಶಸ್ತಿ ಪುರಸ್ಕೃತ ಗೌರಿ ಕೊರಗ ಅವರನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕೊರಗ ಸಮುದಾಯದ ಮುಖಂಡರು ಅಭಿನಂದಿಸಿದರು .

 

Related Posts

Leave a Reply

Your email address will not be published.