ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಹಾಗೂ ಜನಪ್ರಿಯ ಭಾಗವತರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು ಮುಂಜಾಜೆ ಬೆಂಗಳೂರಿನ ಅವರ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ ಅವರಿಗೆ 67 ವರ್ಷ ಪ್ರಾಯವಾಗಿತ್ತು.

ಯಕ್ಷಗಾನ ರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು.

ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದ ರಂಗಂಮಚವೇರಿದವರು ಯಶಸ್ಸಿನ ಶಿಖರ ತಲುಪಿದ್ದರು. 1957ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು.

ಬಳಿಕ ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಮೂಲಕ ರಂಗಸ್ಥಳದ ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು.

ಮೇಳ ಬಿಟ್ಟು 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಬದುಕಿನುದ್ದಕ್ಕೂ ತಮ್ಮ ಸ್ವರದ ಮೂಲಕವೇ ಅಭಿಮಾನಿಗಳನ್ನು ಸೆಳೆದಿಟ್ಟುಕೊಂಡಿದ್ದ ಭಾಗವತರ ಅಗಲುವಿಕೆ ನಿಜಕ್ಕೂ ಮಾತಾಡದ ಸ್ಥಿತಿ ತಂದಿದೆ.

V4 ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮವಾಗಿದ್ದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ನಡೆಸಿಕೊಡುತ್ತಿದ್ದ ಬಲ್ಲಿರೇನಯ್ಯ ಕಾರ್ಯಕ್ರಮಕ್ಕೂ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಆಗಮಿಸಿ, ಯಕ್ಷಲೋಕದಲ್ಲಿ ಬೆಳೆದು ಬಂದ ಹಾದಿಯನ್ನು ವಿವರಿಸಿದ್ದರು. ಆ ಕಾರ್ಯಕ್ರಮವು ಜನಪ್ರಸಿದ್ಧಿಯನ್ನು ಪಡೆದಿತ್ತು.

add- Bhima

Related Posts

Leave a Reply

Your email address will not be published.