ಡಿಸೆಂಬರ್ 12 ರಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ

ಬೆಂಗಳೂರು: ಒಕ್ಕಲಿಗರ ಪ್ರಾತಿನಿಧಿಕ ಸಂಸ್ಥೆಗೆ ಡಿಸೆಂಬರ್ 12 ರಂದು ನಡೆಯಲಿರುವ ಚುನಾವಣೆಗೆ ಸಂಘದ ಮಾಜಿ ಅಧ್ಯಕ್ಷ ಬಿ. ಕೆಂಚಪ್ಪಗೌಡ ನೇತೃತ್ವದ ತಂಡ ಸಜ್ಜಾಗಿದ್ದು, ಸಂಘದ ಗತ ವೈಭವವನ್ನು ಮತ್ತೆ ಮರಳಿ ತರಲು ಕಾರ್ಯೋನ್ಮುಖವಾಗಿದೆ.
2021 – 26 ರ ಅವಧಿಗೆ ನಡೆಯಲಿರುವ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ. ಕೆಂಚಪ್ಪಗೌಡ, 2008 –13 ರ ಸಾಲಿನಲ್ಲಿ ನಮ್ಮ ತಂಡ ಅಭಿವೃದ್ಧಿ ಪರ್ಷಕ್ಕೆ ಚಾಲನೆ ನೀಡಿತ್ತು. ಈ ಪರಂಪರೆಯನ್ನು ಮುಂದುವರೆಸಲು ನಮ್ಮ ತಂಡವನ್ನು ಬೆಂಬಲಿಸಿ. ಪ್ರಾಮಾಣಿಕ ಸೇವೆ, ಸಂಘದ ಭವಿಷ್ಯ ಮತ್ತು ಸುಧಾರಣೆಗಾಗಿ ಶ್ರಮಿಸಬಲ್ಲ ಉತ್ಸಾಹಿ ತಂಡ ನಮ್ಮದಾಗಿದೆ. ಸಂಘದ ದ್ಯೇಯೋದ್ಧೇಶಗಳು, ಪ್ರಯೋಜನಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಬದ್ಧತೆಯ ತಂಡ ಚುನಾವಣಾ ಅಖಾಡಕ್ಕೆ ಇಳಿದಿದೆ ಎಂದರು.
ಬಿ.ಕೆಂಚಪ್ಪಗೌಡ ತಂಡದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಅಶೋಕ್ ಹೆಚ್.ಎನ್. ಎಸ್.ಕೃಷ್ಣಪ್ಪ, ಸಿ.ದೇವರಾಜು , ಡಾವಿ.ನಾರಾಯಣಸ್ವಾಮಿ, ನೀಲಕಂಠ ಆರ್.ಗೌಡ, ಆರ್.ಪ್ರಕಾಶ್,ಭಾರತಿ.ವಿ, ಸಿ.ಎಂ.ಮಾರೇಗೌಡ , ಬಿ.ವಿ.ರಾಜಶೇಖರ್ ಗೌಡ, ಡಿ.ಎಂ.ವಿಶ್ವನಾಥ್, ವೆಂಕಟರಾಮೇಗೌಡ, ಎಲ್.ಶ್ರೀನಿವಾಸ್, ಕೆ.ಎಸ್.ಸುರೇಶ್ ಹಾಗೂ ಟಿ.ಎನ್.ಹರೀಶ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಇವರನ್ನು ಬೆಂಬಲಿಸಬೇಕು ಎಂದು ಕೋರಿದರು.
2014 ರಿಂದ 2018 ರ ಅವಧಿಯಲ್ಲಿ ನಿರ್ದೇಶಕರು ಮತ್ತು ಪದಾಧಿಕಾರಿಗಳ ವೈಫಲ್ಯದಿಂದ ಸಂಘದ ವರ್ಚಸ್ಸಿಗೆ ಧಕ್ಕೆಯಾಗಿದೆ. ಮೂರುವರೆ ವರ್ಷಗಳಿಂದ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಕಠಿಣ ಪರಿಸ್ಥಿತಿ ತಲೆ ದೋರಿದೆ. ಸಂಘವನ್ನು ಸ್ವಂತ ಸ್ವತ್ತು ಮಾಡಿಕೊಂಡು ಬೇಜವಾಬ್ದಾರಿ ವರ್ತನೆ ಖಂಡನೀಯ. ಹಿಂದಿನ ಆಡಳಿತಾವಧಿಯಲ್ಲಿ ಸಂಘಕ್ಕೆ ಬರಬೇಕಿರುವ ಬಾಕಿ ಹಣ ವಸೂಲಿ, ಹಿಂದಿನ ಆಡಳಿತದ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವುದಾಗಿ ಬಿ .ಕೆಂಚಪ್ಪಗೌಡ ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು, ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ವಿದ್ಯಾರ್ಥಿ ನಿಲಯಗಳು, ವಿದ್ಯಾರ್ಥಿ ವೇತನಕ್ಕಾಗಿ ವಿಶೇಷ ನಿಧಿ, ವಿವಿಧ ಕೋರ್ಸ್ ಗಳ ಆರಂಭ, ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಉತ್ತೇಜನ, ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸುವ ಸಕಲ ಸೌಲಭ್ಯ ಒದಗಿಸಲು ಕ್ರಮ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗಳಿಗೆ ಸರ್ಕಾರಿ ಶುಲ್ಕದೊಂದಿಗೆ ಪ್ರವೇಶ ಕಲ್ಪಿಸುವ ವಿದ್ಯಾರ್ಜನೆ ಕಾರ್ಯಕ್ರಮ ಜಾರಿ, ಒಕ್ಕಲಿಗರ ಸಂಘದಲ್ಲಿ ಕಾರ್ಯನಿರ್ವಹಿಸುವ ಖಾಯಂ ಸಿಬ್ಬಂದಿಗೆ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ನಿವೃತ್ತ ನೌಕರರ ಸೇವೆಯ ಸಮರ್ಪಕ ಬಳಕೆ ಜೊತೆಗೆ, ಹೆಚ್ಚುವರಿ ಬೋಧಕ, ಬೋಧಕೇತರ ಸಿಬ್ನಂದಿಯನ್ನು ಮಾನವೀಯ ದೃಷ್ಟಿಯಿಂದ ಖಾಯಂಗೊಳಿಸಲು ಕ್ರಮ, ಪ್ರತಿವರ್ಷ ಉದ್ಯೋಗ ಮೇಳ, ಸಂಘದಲ್ಲಿ ಮಹಿಳಾ ಮೀಸಲಾತಿ ಜಾರಿ, ಸಂಘದ ಹಿತ ರಕ್ಷಣೆಗೆ ಬೈಲಾ ತಿದ್ದುಪಡಿ, ಕೆಂಪೇಗೌಡರು ಮತ್ತು ಕುವೆಂಪು ದಿನಾಚರಣೆಯ ಅರ್ಥಪೂರ್ಣ ಆಚರಣೆ, ಸರ್ಕಾರ ಗುರುತಿಸುವ ಪ್ರಗತಿಪರ ರೈತರಿಗೆ ಒಂದು ಲಕ್ಷ ರೂ ನಗದು ಬಹುಮಾನ, ಆರೋಗ್ಯ ಸೌಲಭ್ಯ, ಸೌಕರ್ಯದಲ್ಲಿ ಹೆಚ್ಚಳ, ಒಕ್ಕಲಿಗರ ಭವನದಲ್ಲಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ, ಕ್ಯಾನ್ಸರ್ ಸಂಶೋಧನಾ ಕೇಂದ್ರ ಸ್ಥಾಪನೆ, ಶ್ರೀಗಂಧದ ಕಾವಲಿನಲ್ಲಿ ಆಯುರ್ವೇದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಸೇರಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.