ತಲೆಮರೆಸಿಕೊಂಡಿದ್ದ ಖೋಟಾ ನೋಟು ಪ್ರಕರಣದ ಆರೋಪಿಯ ಬಂಧನ

ಪುತ್ತೂರು: 19 ವರ್ಷಗಳ ಹಿಂದೆ ಖೋಟಾ ನೋಟು ಸಾಗಾಟದ ವೇಳೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸೆಂಟ್ಯಾರ್‌ನಲ್ಲಿ ಸಂಪ್ಯ ಪೊಲೀಸರಿಂದ ಬಂಧಿತರಾಗಿದ್ದ ನಾಲ್ವರು ಆರೋಪಿಗಳ ಪೈಕಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿಯನ್ನು ಕುಂಬ್ಳೆಯಲ್ಲಿ ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಮುಳಿಯಾರ್ ಬೋವಿಕ್ಕಾನ ಪರಪಿಡಕ ನಿವಾಸಿ ಸಿದ್ದಿಕ್ ಯಾನೆ ಕಲಂದರ್ ಸಿದ್ದಿಕ್(41 ವ)ರವರು ಬಂಧಿತ ಆರೋಪಿ. 2002ರಲ್ಲಿ ಕಲಂದರ್ ಸಿದ್ದಿಕ್ ಮತ್ತು ಇತರ ಮೂವರು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಸೆಂಟ್ಯಾರ್‌ನಲ್ಲಿ ಸಂಪ್ಯ ಪೊಲೀಸರು ತಪಾಸಣೆ ನಡೆಸುತಿದ್ದ ವೇಳೆ ಬೈಕ್‌ಗಳಲ್ಲಿ ಬಂದ ನಾಲ್ವರಲ್ಲಿ ಸುಮಾರು ೮೦ಸಾವಿರದಷ್ಟು ಖೋಟಾ ನೋಟು ಪತ್ತೆಯಾಗಿತ್ತು. ಈ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು. ಆದರೆ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿಗಳ ಮೇಲೆ ವಾರಂಟ್ ಜಾರಿ ಮಾಡಿತ್ತು. ಆರೋಪಿಯನ್ನು ಪತ್ತೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವನೆ ಮತ್ತು ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಹಾಗು ಗ್ರಾಮಾಂತರ ವೃತ್ತ ನಿರೀಕ್ಷಕರ ಮಾರ್ಗದರ್ಶನದಂತೆ ಪುತ್ತೂರು ಸಂಪ್ಯ ಪೊಲೀಸ್ ಠಾಣೆ ಎಸ್.ಐ ಉದಯರವಿ ಮತ್ತು ಸಿಬ್ಬಂದಿಗಳಾದ ಅದ್ರಾಮ ಮತ್ತು ಪ್ರವೀಣ್ ರೈ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯುನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related Posts

Leave a Reply

Your email address will not be published.