ತಲ್ಲೂರು ಕೊರೋನಾ ಮುಕ್ತ ಗ್ರಾಮವಾಗಬೇಕು:ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ: ಮಹಾಮಾರಿ ಕೊರೋನಾ ಹೊಡೆದುರುಳಿಸಲು ಸರ್ಕಾರ ಇಷ್ಟೊಂದು ಪ್ರಮಾಣದಲ್ಲಿ ಗಟ್ಟಿಯಾಗಿ ನಿಂತಿದೆ. ಕಾರ್ಯಪಡೆಯವರು ಮನೆಮನೆಗೆ ಭೇಟಿ ನೀಡಿ, ಸಭೆ ನಡೆಸಿ ಶ್ರಮ ಹಾಕಿದ್ದರಿಂದಾಗಿ ನಿಮ್ಮ ವ್ಯಾಪ್ತಿಯಲ್ಲಿ 80ರಷ್ಟಿದ್ದ ಪಾಸಿಟಿವ್ ಪ್ರಕರಣ ಈಗ 8ಕ್ಕೆ ಬಂದು ತಲುಪಿದೆ. ಈ ಸಂಖ್ಯೆ ಶೂನ್ಯಕ್ಕಿಳಿದು ತಲ್ಲೂರು ಗ್ರಾಮಪಂಚಾಯತ್ ಶೀಘ್ರವೇ ಕೊರೋನಾ ಮುಕ್ತವಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಲ್ಲಿಗೆ ಸಮೀಪದ ತಲ್ಲೂರಿನ ಅಂಬೇಡ್ಕರ್ ಸಭಾಭವನದಲ್ಲಿ ತಲ್ಲೂರು ಗ್ರಾ.ಪಂ.ನ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಮಾತನಾಡಿದರು. ಪಾಸಿಟಿವ್ ಪ್ರಕರಣ ಕಂಡುಬಂದ ಮನೆಗಳಿಗೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೀಲ್ಡೌನ್ ಮಾಡಬೇಕು. ಪಿಡಿಓ ಹಾಗೂ ಕಾರ್ಯಪಡೆಯ ಸದಸ್ಯರು ಕ್ವಾರಂಟೈನ್ನಲ್ಲಿರುವವರು ಹೊರಗೆ ಬಾರದಂತೆ ನೋಡಿಕೊಳ್ಳಬೇಕು. ಸೀಲ್ಡೌನ್ ಮಾಡಿರುವ ಮನೆಗಳಿಗೆ ಆಹಾರ ಕಿಟ್, ಔಷಧಿ, ಅಗತ್ಯ ವಸ್ತುಗಳನ್ನು ಸರಬರಾಜು ಮಾಡಬೇಕು. ಈ ಮೂಲಕ ಕೊರೋನಾ ಪಾಸಿಟಿವ್ ಸಂಖ್ಯೆ ಮತ್ತೆ ಮೇಲೇರದಂತೆ ನೋಡಿಕೊಳ್ಳಿ ಎಂದು ಸಚಿವರು ಹೇಳಿದರು.
ಕೆಲವು ಭಾಗಗಳಲ್ಲಿ ಕ್ವಾರಂಟೈನ್ನಲ್ಲಿರವವರು ಆಶಾ ಕಾರ್ಯಕರ್ತರ ಮಾತುಗಳನ್ನು ಕೇಳುತ್ತಿಲ್ಲ ಎಂಬ ದೂರುಗಳು ಬಂದಿವೆ. ಪಂಚಾಯತ್ ಅಭಿವೃದ್ದಿ ಅಧಿಕಾರಿ ಆ ಕೂಡಲೇ ಬೀಟ್ ಪೊಲೀಸರನ್ನು ಕರೆದು ಕ್ವಾರಂಟೈನ್ ಅಲ್ಲಿರುವವರು ಮನೆಯಿಂದ ಹೊರಗೆ ಬಾರದಂತೆ ತಾಕೀತು ಮಾಡಬೇಕು. ನಂತರವೂ ಹೊರಗೆ ಬಂದರೆ ನಿರ್ದಾಕ್ಷಿಣ್ಯವಾಗಿ ಅವರ ಮೇಲೆ ಪ್ರಕರಣ ದಾಖಲಿಸಬೇಕು. ಸೀಲ್ಡೌನ್ ಮಾಡಿರುವ ಮನೆಗಳ ಸದಸ್ಯರಿಗೆ ಅಭದ್ರತೆ ಕಾಡಿದರೆ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತಾಡಿಸಿ ನಿಮ್ಮ ಜೊತೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಬೇಕು ಎಂದರು.
ತಲ್ಲೂರಿನಲ್ಲಿ ಲಸಿಕೆ ಶಿಬಿರ:
ತಲ್ಲೂರು ಗ್ರಾ.ಪಂ. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿದ್ದು, ಲಸಿಕೆಗಾಗಿ 15 ಕಿ.ಮೀ. ಸಂಚರಿಸಬೇಕು. ಇದಕ್ಕಾಗಿ ನಮ್ಮನ್ನು 2 ಕಿ.ಮೀ. ದೂರದ ಹಟ್ಟಿಯಂಗಡಿ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಎನ್ನುವ ಅಭಿಪ್ರಾಯವನ್ನು ಸ್ಥಾಯೀ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಸಚಿವರು, ಅಧ್ಯಕ್ಷರು ಒಂದು ಮನವಿ ಪತ್ರ ಕೊಡಲಿ. ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಈಗ ತಲ್ಲೂರು ಗ್ರಾಮಸ್ಥರಿಗೆ ಈ ಪಂಚಾಯತ್ ವ್ಯಾಪ್ತಿಯಲ್ಲಿ ಲಸಿಕೆ ಶಿಬಿರ ಏರ್ಪಡಿಸಲು ವ್ಯವಸ್ಥೆ ಮಾಡಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ತಲ್ಲೂರು ಗ್ರಾ.ಪಂ. ಅಧ್ಯಕ್ಷೆ ಭೀಮವ್ವ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ನಾಯಕ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಂಜಿತ್, ಕುಂದಾಪುರ ಠಾಣೆಯ ಎಎಸ್ಐ ಸುಧಾಕರ್ ಉಪಸ್ಥಿತರಿದ್ದರು.