ನಮ್ಮಲ್ಲಿ ಯಾವುದೇ ಬಣವಿಲ್ಲ, ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಧ್ಯೇಯ:ಮಂಗಳೂರಲ್ಲಿ ರಕ್ಷಾ ರಾಮಯ್ಯ

ನಮ್ಮಲ್ಲಿ ಯಾವುದೇ ಬಣವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದೇ ನಮ್ಮ ಧ್ಯೇಯವಾಗಿದೆ. ಪಕ್ಷದ ಹೈಕಮಾಂಡ್ ಸೂಚನೆಯಂತೆ ತಾನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದೆ. ಇದೀಗ ಹೈಕಮಾಂಡ್ ಅಧ್ಯಕ್ಷ ಸ್ಥಾನವನ್ನು ಮುಹಮ್ಮದ್ ನಲಪಾಡ್‌ಗೆ ಹಸ್ತಾಂತರಿಸುವಂತೆ ಸೂಚಿಸಿದೆ. ಅದರಂತೆ ಅಧಿಕಾರ ಹಸ್ತಾಂತರ ಮಾಡುವುದಾಗಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಹೇಳಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಮತ್ತು ನಲಪಾಡ್ ಮಧ್ಯೆ ಭಿನ್ನಮತವಿಲ್ಲ. ಕಳೆದ 12 ವರ್ಷಗಳಿಂದ ನಾವು ಸ್ನೇಹಿತರಾಗಿದ್ದೇವೆ. ನಮ್ಮೊಳಗೆ ಯಾವುದೇ ಬಣವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದೇ ನಮ್ಮ ಧ್ಯೇಯವಾಗಿದೆ ಎಂದರು. ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಂತ ಮುಹಮ್ಮದ್ ನಲಪಾಡ್ ಬಾಯಿ ತಪ್ಪಿ ಹೇಳಿರಬಹುದು. ಪಕ್ಷ ಸಂಘಟನೆಯೇ ನಮ್ಮ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ನಾವೆಲ್ಲರೂ ಕೆಲಸ ಮಾಡಲಿದ್ದೇವೆ. ಕಾಂಗ್ರೆಸ್‌ಗೆ ಯುವಕರನ್ನು ಸೆಳೆಯುವ ಬಗ್ಗೆ ಅಭಿಯಾನ ಆರಂಭಿಸಲಿದ್ದೇವೆ ಎಂದು ರಕ್ಷಾ ರಾಮಯ್ಯ ನುಡಿದರು.

ಬಿಜೆಪಿಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕಾಗಿ 50ರಿಂದ 60 ಕೋ.ರೂ.ವರೆಗೆ ಸುರಿದಿದೆ. ಅದರಿಂದ ಬಿಜೆಪಿಗೆ ಅನಿರೀಕ್ಷಿತ ಫಲಿತಾಂಶ ಬಂದಿರಬಹುದು ಅಥವಾ ಪರಿಣಾಮ ಬೀರಿರಬಹುದು. ಆದರೆ, ಅದು ಶಾಶ್ವತವಲ್ಲ. ಬಿಜೆಪಿಯ ಕಾರ್ಯವೈಖರಿಯು ಏನೂಂತ ಜನಸಾಮಾನ್ಯರಿಗೆ ಅರ್ಥವಾಗುತ್ತಾ ಬಂದಿದೆ ಎಂದು ರಕ್ಷಾ ರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ರಾಷ್ಟ್ರೀಯ ನಾಯಕ ಅನಿಲ್ ಯಾದವ್, ರಾಜ್ಯ ನಾಯಕ ಮಿಥುನ್ ರೈ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.