ನಿರರ್ಥಕ ಜಯಕ್ಕಿಂತ ಸಾರ್ಥಕ ಅಪಜಯ ಶ್ರೇಷ್ಠ: ಪ್ರೊ.ರಾಜಾರಾಮ ತೋಳ್ಪಾಡಿ

ಸಂಶೋಧನೆ ಎಂಬ ಜಟಿಲ ಮತ್ತು ಸಂಕೀರ್ಣವಾದ ಪರಿಕಲ್ಪನೆಯನ್ನು ಸರಳವಾಗಿ ವಿವರಿಸುವ ಪ್ರಯತ್ನ ಮಾಡುವ ಮತ್ತು ಸಂಶೋಧನೆ ಅಂದರೆ ಏನು, ಸಂಶೋಧನೆಯನ್ನು ಉನ್ನತ ಶಿಕ್ಷಣವೆಂದು ಯಾಕೆ ಕರೆಯುತ್ತಾರೆ ಎಂಬುದನ್ನು ತಾತ್ವಿಕವಾಗಿ ವಿವೇಚನೆಗೆ ಒಳಪಡಿಸುವ ‘ಮಾರ್ಗಾನ್ವೇಷಣೆ’ ಪುಸ್ತಕವು ಒಂದು ಸಾಹಸೀ ಪ್ರಯೋಗವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ ನಿರ್ದೇಶಕರಾಗಿರುವ ಪ್ರೊ. ರಾಜಾರಾಮ ತೋಳ್ಪಾಡಿ ಹೇಳಿದರು.

ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಮತ್ತು ಯುಜಿಸಿ ಸ್ಟ್ರೈಡ್ ಯೋಜನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರ ‘ಮಾರ್ಗಾನ್ವೇಷಣೆ’ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕೃತಿಯನ್ನು ನಿರೂಪಿಸಲು ಬಳಸಿರುವ ವಿಧಾನಕ್ರಮದಲ್ಲಿ ಒಂದು ಹೊಸ ಪ್ರಯೋಗ ಇದೆ. ತಾನು ಹೇಳಬೇಕಾದ ವಿಷಯವನ್ನು ಕುರಿತು ತನ್ನದೇ ಆದ ರೀತಿಯನ್ನು ಕಂಡುಕೊಂಡ ಪುಸ್ತಕ ಇದಾಗಿದೆ. ಇದರಲ್ಲಿ ಸಂಶೋಧನೆಯನ್ನು ವಿಸ್ತೃತ ನಕಾಶೆಯಲ್ಲಿ ಗುರುತಿಸಲು ಪ್ರಯತ್ನಿಸಲಾಗಿದ್ದು ಅನೇಕ ಜ್ಞಾನಶಿಸ್ತುಗಳು ಪರಸ್ಪರ ಹೊಂದಿರುವ ಅಂತರ್ ಸಂಬಂಧಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ ಮಾರ್ಗಾನ್ವೇಷಣೆ.ಸಂಶೋಧನೆ ಎಂಬುದು ತಾತ್ವಿಕ ಚಟುವಟಿಕೆಯಾಗಿದ್ದು ಸಂಶೋಧನೆಯಲ್ಲಿ ಇರಬೇಕಾದ ತಾತ್ವಿಕತೆಯ ಮಹತ್ವವನ್ನು ಮತ್ತು ಅದರ ಅಗತ್ಯತೆಯನ್ನು ಬಹಳ ತೀವ್ರವಾಗಿ ಈ ಕೃತಿ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.

ಹಿರಿಯ ಜಾನಪದ ಸಂಶೋಧಕರೂ ವಿಶ್ರಾಂತ ಕುಲಪತಿಗಳೂ ಆದ ಪ್ರೊ. ಕೆ. ಚಿನ್ನಪ್ಪ ಗೌಡರು ಮಾತನಾಡಿ ಸಂಶೋಧನೆಯು ಪಶ್ಚಿಮದ ಶೈಕ್ಷಣಿಕ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದ ಸಂಗತಿಯನ್ನು ಬಹು ಖಚಿತವಾಗಿ ತಿಳಿಸುವ ಈ ಪುಸ್ತಕದಲ್ಲಿ ಜ್ಞಾನ, ಉನ್ನತ ಜ್ಞಾನ, ಮೆಥಡ್-ಮೆಥಡಾಲಜಿ, ಢಿಯರಿ ಐಡಿಯಾಲಜಿಗಳೆಂಬ ಪರಿಕಲ್ಪನೆಗಳನ್ನು ಬಹಳ ಆಳವಾಗಿ ವಿಶ್ಲೇಷಿಸಲಾಗಿದೆ ಎಂದು ಹೇಳಿದರು. ಕನ್ನಡ ಸಂಶೋಧನೆಯು ಕುಸಿಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ದಿನಗಳಲ್ಲಿ ಕ್ರಿಯಾಶೀಲ ಅಧ್ಯಯನಕಾರರು ಸುಮ್ಮನೆ ಕೂರುವುದಿಲ್ಲ ಎಂಬ ಹಂಬಲದಿಂದ ಒಡಮೂಡಿದ ಪುಸ್ತಕ ಇದಾಗಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವ ಅವರು ಮಾತನಾಡಿ ಇಡೀ ಜಗತ್ತಿನಲ್ಲಿ ಸಂಶೋಧನೆ ನಡೆದುಬಂದ ದಾರಿಯನ್ನು ಈ ಪುಸ್ತಕ ತಿಳಿಸುತ್ತದೆ. ನಮ್ಮ ಸಮಸ್ಯೆಯ ನಾರು-ಬೇರುಗಳು ಎಲ್ಲಿಂದ ಬಂದಿವೆ, ಅವು ಹೇಗಿವೆ ಮತ್ತು ಅವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಯಲು ಈ ಪುಸ್ತಕ ನೆರವಾಗುತ್ತದೆ. ಒಂದು ಒಳ್ಳೆಯ ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಈ ಪುಸ್ತಕವು ಓದುಗರ ಸಂಶಯವನ್ನು ನಿವಾರಣೆ ಮಾಡುತ್ತದೆ. ಸಂಶೋಧನೆಯ ಅರ್ಥ ಮನನ ಮಾಡಿಕೊಳ್ಳದೆ ಸಂಶೋಧನೆಗೆ ಇಳಿಯಬಾರದು ಎಂಬ ಲೇಖಕರ ಕಾಳಜಿ ಪ್ರತಿ ಪುಟದಲ್ಲೂ ವ್ಯಕ್ತವಾಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಆದ ರೆ.ಫಾ.ಮೆಲ್ವಿನ್ ಜೋಸೆಫ್ ಪಿಂಟೋ ಕನ್ನಡ ಸಂಶೋಧನ ಕ್ಷೇತ್ರಕ್ಕೆ ಇಂತಹ ಮಹತ್ವದ ಪುಸ್ತಕವನ್ನು ನೀಡಿದ ನಿತ್ಯಾನಂದ ಬಿ ಶೆಟ್ಟಿಯವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ. ಪ್ರವೀಣ್ ಮಾರ್ಟಿಸ್, ಯುಜಿಸಿ ಸ್ಟ್ರೈಡ್ ಯೋಜನೆಯ ನಿರ್ದೇಶಕರಾದ ಡಾ.ಆಲ್ವಿನ್ ಡೇಸಾ, ಪುಸ್ತಕದ ಲೇಖಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ, ಡಾ. ದಿನೇಶ್ ನಾಯಕ್, ಸಾಹಿತ್ಯಾಸಕ್ತರು ಮತ್ತು ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.

 

Related Posts

Leave a Reply

Your email address will not be published.