ಪಡುಬಿದ್ರಿಯಲ್ಲಿ ಜಾತಿ ಧರ್ಮ ಮೀರಿ ನಡೆದ ಮುದ್ದು ಕೃಷ್ಣ ಸ್ಪರ್ಧೆ
ಪಡುಬಿದ್ರಿ: ಮಹಮ್ಮದ್ ನಿಯಾಜ್ ನೇತೃತ್ವದ ಪಡುಬಿದ್ರಿ ರೋಟರಿ ಕ್ಲಬ್, ಮಹಿಳಾ ವಿಭಾಗದ ಇನ್ನರ್ ವೀಲ್ ಕ್ಲಬ್ ಹಾಗೂ ಸಮುದಾಯ ದಳ ಈ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ, ಜಾತಿ ಧರ್ಮಗಳನ್ನು ಮೆಟ್ಟಿನಿಂತು ಎಲ್ಲಾ ಸಮುದಾಯದ ಮಂದಿ ಪಾಲ್ಗೊಂಡು ಎಂಬತ್ತಕ್ಕೂ ಅಧಿಕ ಪುಟಾಣಿ ಸ್ಪರ್ಧಾಳುಗಳ ಭಾಗವಹಿಸುವಿಕೆಯ ಮೂಲಕ ಪಡುಬಿದ್ರಿ ಆರ್. ಆರ್. ಕಲೋನಿಯ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ರೋಟರಿ ಸಂಸ್ಥೆಯ ಪ್ರಮುಖರಾದ ನವೀನ್ ಅಮೀನ್ ಶಂಕರಪುರ, ಕೋವಿಡ್ ಹಿನ್ನಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ಪರದೆಯ ಹಿಂದೆ ಸರಿದ ಬಳಿಕದ ಕಾಲಘಟ್ಟದಲ್ಲಿ ಇದೀಗ ಪಡುಬಿದ್ರಿ ರೋಟರಿ ಸಂಸ್ಥೆ ತನ್ನ ಅಂಗ ಸಂಸ್ಥೆಗಳನ್ನು ಸೇರಿಸಿಕೊಂಡು ಎಲ್ಲಾ ಜಾತಿ ಧರ್ಮಗಳ ಜನರನ್ನು ಹೊಂದಿಸಿಕೊಂಡು ಐದುವರೆ ವರ್ಷ ವಯಸ್ಸಿನಿಂದ ಹತ್ತು ವಯೋಮಿತಿವರಗಿನ ಪುಟಾಣಿಗಳ ಕೃಷ್ಣ ಸ್ಪರ್ಧೆ, ರಾಧೆ ಸ್ಪರ್ಧೆ, ರಾಧಾಕೃಷ್ಣ ಸ್ಪರ್ಧೆ ಹೀಗೆ ಬೇರೆ ಬೇರೆ ವಿಭಾಗದಲ್ಲಿ ನಡೆಸುವ ಮೂಲಕ ಕೃಷ್ಣಾಷ್ಟಾಮಿಯನ್ನು ಬಹಳ ಅರ್ಥ ಪೂರ್ಣವಾಗಿ ಆಚರಿಸಿದ್ದಾರೆ ಎಂದರು.
ಈ ಅರ್ಥಪೂರ್ಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶಿವಧೂತೆ ಗುಳಿಕ ನಾಟಕದ ಗುಳಿಗ ಪಾತ್ರಧಾರಿ ಸ್ವರಾಜ್ ಶೆಟ್ಟಿ, ಚಲನಚಿತ್ರ ನಟಿ ನವ್ಯ ಪೂಜಾರಿ, ನವೀನ್ ಚಂದ್ರ ಸುವರ್ಣ, ಕೇಸರಿ ಯುವರಾಜ್, ದೀಪಕ್ ಕೋಟ್ಯಾನ್ ಇನ್ನಾ, ರಮೀಝ್ ಹುಸೇನ್, ಶಶಿಕಲ, ಅನೀತಾ ಬಿ.ವಿ., ಲಾವಣ್ಯ ಮುಂತಾದವರಿದ್ದರು.