ಪ್ರತಿದಿನ 1 ಕೋಟಿ ಮಂದಿಗೆ ಲಸಿಕೆ : ಸರಕಾರಕ್ಕೆ ನಿರ್ದೇಶನ ನೀಡಲು ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ

ದೇಶದಲ್ಲಿ ಪ್ರತಿ ದಿನ ಒಂದು ಕೋಟಿ ಜನತೆಗೆ ಕೋವಿಡ್ ನಿಯಂತ್ರಕ ಲಸಿಕೆ ಸಂಪೂರ್ಣ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ನಿರ್ದೇಶನ ನೀಡುವಂತೆ ಒತ್ತಾಯಿಸಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿದೆ.


ದೇಶದಲ್ಲಿ ಸದ್ಯ ಕೇವಲ 16 ಲಕ್ಷ ಮಂದಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಈ ವೇಗದಲ್ಲಿ ಲಸಿಕೆ ನೀಡುತ್ತಾ ಹೋದರೆ ಎಲ್ಲರಿಗೂ ಲಸಿಕೆ ದೊರೆಯುವುದು ತುಂಬಾ ವಿಳಂಬ ಆಗಲಿರುವುದುರಿಂದ ಕೇಂದ್ರ ಸರಕಾರ ಉಚಿತ ಲಸಿಕೆ ನೀಡುವ ದಿನದ ಗುರಿಯನ್ನು ಒಂದು ಕೋಟಿಗೆ ನಿಗದಿ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ನಿಯೋಗ ಮನವಿ ಮಾಡಿದೆ.
ಕಾಂಗ್ರೆಸ್ ನಿಯೋಗದಲ್ಲಿ ಡಿಸಿಸಿ ಅಧ್ಯಕ್ಷರು, ವಿಧಾನಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ ಮತ್ತು ಅಭಯಚಂದ್ರ ಜೈನ್, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದೀನ್ ಬಾವ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮತ್ತಿತರರು ಉಪಸ್ಥಿತರಿದ್ದರು.


ದೇಶದಲ್ಲಿ ಕಳೆದ ಮೇ 31ರ ವರೆಗೆ 21.31 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅಂದರೆ, ಕೇವಲ 4.45 ಕೋಟಿ ಜನರಿಗೆ ಲಸಿಕೆ ನೀಡಿದಂತಾಗುತ್ತದೆ. ಇದು ಭಾರತದ ಜನಸಂಖ್ಯೆಯ ಕೇವಲ 3.17 ಮಾತ್ರ. ಕಳೆದ 134 ದಿನಗಳಲ್ಲಿ ಸರಾಸರಿ ದಿನವೊಂದಕ್ಕೆ ಕೇವಲ 16 ಲಕ್ಷ ಲಸಿಕೆ ಮಾತ್ರ ನೀಡಲಾಗುತ್ತಿದೆ. ಈ ರೀತಿಯಲ್ಲಿ ಲಿಸಿಕಾ ಕಾರ್ಯಕ್ರಮ ನಡೆದರೆ ಎಲ್ಲ ವಯಸ್ಕ ಜನರಿಗೆ ಲಸಿಕೆ ನೀಡುವುದು ವಿಳಂಬ ಆಗಲಿದ್ದು, ಮೂರನೇ ಅಲೆಗೆ ಮುನ್ನ ನಮ್ಮ ದೇಶದ ಜನರ ರಕ್ಷಣೆ ಹೇಗೆ ಸಾಧ್ಯ ಎಂದು ನೇರಂದ್ರ ಮೋದಿ ಸರಕಾರ ಉತ್ತರಿಸಬೇಕಾಗಿದೆ.ಕೇಂದರ ಸರಕಾರವು ಲಸಿಕೆಗಳನ್ನು ಖರೀದಿಸಿ ಉಚಿತವಾಗಿ ರಾಜ್ಯ ಸರಕಾರಗಳಿಗೆ ನೀಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಮುಂಬರುವ ಡಿಸೆಂಬರ್ ಅಂತ್ಯದ ಮುನ್ನ ಹದಿನೆಂಟು ಮತ್ತು ಹೆಚ್ಚಿನ ವಯೋಮಾನದವರಿಗೆ ಉಚಿತ ಲಸಿಕೆ ಹಾಕಬೇಕಾಗುತ್ತದೆ.

ಕೇಂದ್ರ ಸರಕಾರವು ಮೂರು ರೀತಿಯ ದರ ನಿಗದಿ ಮಾಡಿರುವುದು ನ್ಯಾಯಯುತವಾಗಿಲ್ಲ. ಇಂದು ಖಾಸಗಿ ಆಸ್ಪತ್ರೆಗಳಲ್ಲಿ 600 ರೂ.ನಿಂದ 1,500 ರೂ. ದರದಲ್ಲಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಜನರ ಸಂಕಷ್ಟ ಕಾಲದಲ್ಲಿ ಮೋದಿ ಸರಕಾರವು ಕೆಲವು ಮಂದಿಗೆ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಾಂಗ್ರೆಸ್ ಮನವಿಯಲ್ಲಿ ಹೇಳಿದೆ.

Related Posts

Leave a Reply

Your email address will not be published.