ಬೆಳಪು ಹಾಲು ಉತ್ಪಾದಕರ ವಾರ್ಷಿಕ ಸಭೆ

ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘ ಪಣಿಯೂರು ಇದರ ವಾರ್ಷಿಕ ಮಹಾಸಭೆ ಪಣಿಯೂರು ಸಂಘದ ಆವರಣದಲ್ಲಿ ನಡೆಯಿತು. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ| ಅನಿಲ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಆರೋಗ್ಯಕರವಾಗಿ ಪಶು ಸಾಕಾಣಿಕೆ ಮಾಡಿ ಗುಣಮಟ್ಟದ ಹಾಲಿನ ಉತ್ಪಾದನೆ ಮೂಲಕ ಹೈನುಗಾರರು ಆರ್ಥಿಕ ಸ್ಥಿರತೆ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.

ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ| ದೇವಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಹೈನುಗಾರಿಕೆಯಲ್ಲಿ ಲಾಭ – ನಷ್ಟಗಳಿಗಿಂತ ಮಾನಸಿಕ ನೆಮ್ಮದಿಯಿಂದ ಆರೋಗ್ಯ ಪೂರ್ಣ ಜೀವನ ನಡೆಸಲು ಸಹಕಾರಿಯಾಗುತ್ತದೆ. ಬ್ಯಾಂಕ್ ನಿಂದ ಅತೀ ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ರೈತರು ಪಡೆದು ಲಾಭದಾಯಕ ಹೈನುಗಾರಿಕೆ ನಡೆಸಲಿ ಎಂದರು.

ಸಂಘದ ಅಧ್ಯಕ್ಷ ಕೆ. ದಿನೇಶ್ ಶೆಟ್ಟಿ ಮಾತನಾಡಿ, ಸಂಘದ ಎಲ್ಲಾ ಸದಸ್ಯರು ಪಶುಗಳಿಗೆ ವಿಮೆಗಳಿಗೆ ಮಾಡಿದರೆ, ಪಶುಗಳಿಗೆ ತೊಂದರೆ ಆದಾಗ ಉಪಯೋಗಕ್ಕೆ ಬರುತ್ತದೆ. ಅತ್ಯಂತ ಕಡಿಮೆ ದರದಲ್ಲಿ ವಿಮೆ ಲಭ್ಯ ಇದೆ ಎಂದರು.

ಈ ಸಂದರ್ಭದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಶಕುಂತಲ ಶೆಟ್ಟಿ, ಗಣೇಶ್ ದೇವಾಡಿಗ, ನಳಿನಿ ಶೆಟ್ಟಿಯವರಿಗೆ ಬಹುಮಾನ ವಿತರಿಸಲಾಯಿತು. 7ನೇ ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಉತ್ತಮ ಅಂಕಗಳನ್ನು ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತ್ ಲೆಕ್ಕ ಪರಿಶೋಧನಾ ವರದಿ ಓದಿದರು. ಸಂಘದ ಅಧ್ಯಕ್ಷ ಕೆ. ದಿನೇಶ್ ಶೆಟ್ಟಿ ಸ್ವಾಗತಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾದವ್ ರಾವ್ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.

 

Related Posts

Leave a Reply

Your email address will not be published.