ಮದುವೆಯಾಗುವುದಿಲ್ಲ ಎಂದರೆ ಗುಂಪು ಅತ್ಯಾಚಾರ


ಮದುವೆಯಾಗಲು ಒಪ್ಪದ ತರುಣಿಯನ್ನು ಮದುವೆಯಾಗಲು ಬಯಸಿದ್ದವನು ನಾಲ್ವರ ಜೊತೆಗೆ ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಹುಡುಗ ಹುಡುಗಿ ಮೊದಲಿನಿಂದ ಪರಿಚಿತರಿದ್ದರು. ಸರಕಾರಿ ಕೆಲಸ ಸಿಕ್ಕ ಮೇಲೆ ಹುಡುಗಿಯು ಬೆಂಗಳೂರಿನಲ್ಲಿ ಮಹಿಳಾ ಹಾಸ್ಟೆಲ್‍ನಲ್ಲಿ ನೆಲೆಸಿದ ಮೇಲೆ ಹಳ್ಳಿಯ ಸಂಪರ್ಕ ಕಡಿಮೆಯಾಯಿತು. ಅಂತಿಮವಾಗಿ ಯುವಕನು ತನ್ನ ಅಣ್ಣ, ಇಬ್ಬರು ಸ್ನೇಹಿತರು ಎಂದು ನಾಲ್ವರ ಗುಂಪಿನಲ್ಲಿ ಅಪಹರಿಸಿ ಗುಂಪು ಅತ್ಯಾಚಾರ ನಡೆಸಿದ್ದಾನೆ. ಉದ್ದೇಶ ಇಷ್ಟೇ, ತನ್ನನ್ನು ಮದುವೆಯಾಗಲು ಒಪ್ಪದವಳನ್ನು ಯಾರು ಮದುವೆಯಾಗಬಾರದು ಎನ್ನುವುದಾಗಿದೆ.


ಅತ್ಯಾಚಾರ ಎನ್ನುವುದು ಒಂದು ವ್ಯಕ್ತಿತ್ವದ ಕೊಲೆಯಾಗಿದೆ. ಲಿಂಗಾಧಾರಿತ ದಾಳಿಯಾಗಿದೆ. ಸಮಾಜದಲ್ಲಿ ಇದು ಅಸಹಜವಾದರೂ ಹಿಂದಿನಿಂದಲೂ ಇದೆ. ಬಹು ಹಿಂದೆ ಮಾನವನು ಇನ್ನೂ ನಾಗರಿಕನಾಗುವುದಕ್ಕೆ ಮೊದಲು ಅತ್ಯಾಚಾರವು ಒಂದು ಹೀನ ಕೃತ್ಯವೇ ಆಗಿದ್ದರೂ, ಅಂತಾ ಹೆಣ್ಣನ್ನು ಸಮಾಜವು ಸ್ವೀಕರಿಸುತ್ತಿತ್ತು. ಆದರೆ ಆಧುಕನಿಕವೆನ್ನುವ ನಾಗರಿಕ ಸಮಾಜದಲ್ಲಿ ಅಂತಾ ಹೆಣ್ಣಿಗೆ ಸಮಾಜವು ಬೆನ್ನು ತಿರುಗಿಸುವುದು ಕಂಡು ಬರುತ್ತಿದೆ. ಅದಕ್ಕೆ ಕಾರಣ ಧರ್ಮ ಎಂಬವುಗಳ ನಾನಾ ನಿಯಮಗಳು. ಎಲ್ಲ ಧರ್ಮಗಳನ್ನು ಗಂಡಸರೇ ಸ್ಥಾಪಿಸಿ, ನಿಯಮಗಳನ್ನೂ ಅವರೇ ಮಾಡಿ, ಹೆಂಗಸರ ಮೇಲೆ ಹೇರಿರುವುದರಿಂದ ಇವೆಲ್ಲ ಸಾಮಾನ್ಯ.


ಅತ್ಯಾಚಾರವನ್ನು ಯುದ್ಧಾಪರಾಧ ಎಂದು ಪರಿಗಣಿಸಲಾಗಿದೆ. ಅದು ಕುಟುಂಬದೊಳಗಿನ ಕದನ, ಕುಟುಂಬ ಕುಟುಂಬಗಳ ಕದನ, ಎರಡು ಗುಂಪುಗಳ ಯುದ್ಧ, ಎರಡು ದೇಶಗಳ ವಾರ್ ಎಂದರೂ ಹೆಣ್ಣನ್ನು ಅಪಹರಿಸಿ ಅತ್ಯಾಚಾರ ಮಾಡುವುದು ಯುದ್ಧ ತಂತ್ರದ ಒಂದು ಭಾಗವಾಗಿತ್ತು. ಅದು ಈಗಲೂ ನಿಂತಿದೆ ಎಂದು ಹೇಳಲಾಗದು. ಎರಡನೆಯ ಮಹಾಯುದ್ಧದಲ್ಲಿ ಅದು ವ್ಯಾಪಕವಾಗಿ ನಡೆದಿದೆ. ನಾಜೀ ಜರ್ಮನ್ ಸೇನೆ ಮತ್ತು ಅವರ ಮಿತ್ರ ದಂಡು ಜಪಾನೀ ಸೇನೆಯು ಗೆದ್ದು ಸಾಗಿದಲ್ಲೆಲ್ಲ ಸಾಲು ಅತ್ಯಾಚಾರಗಳನ್ನು ನಡೆಸಿದ್ದು ಅತಿ ದೊಡ್ಡ ಅತ್ಯಾಚಾರ ಸಂಪುಟವಾಗಿದೆ.
ಹಾಗೆಂದ ಕೂಡಲೆ ಆ ನಾಜೀ ಸೇನೆಯನ್ನು ಎದುರಿಸಿದ ದೇಶಗಳ ಸೈನಿಕರೆಲ್ಲ ಅತ್ಯಾಚಾರ ಮಾಡಿಲ್ಲ ಎಂದು ಹೇಳುವುದು ಸಾಧ್ಯವಿಲ್ಲ. ಸೇನೆಯಲ್ಲಿ ಕೆಲವರು ಅತ್ಯಾಚಾರ ನಮ್ಮ ಹಕ್ಕು ಎಂದವರೂ ಉಂಟು. ಹಾಗಾಗಿಯೇ ವಾರ್ ಕ್ರೈಮ್‍ನ ಒಂದು ಭಾಗವಾಗಿದೆ ಅತ್ಯಾಚಾರ. ಎರಡನೆಯ ಮಹಾಯುದ್ಧದಲ್ಲಿ ಮುನ್ನುಗ್ಗಿದ ರಶಿಯಾದ ಸೈನಿಕರು ಜರ್ಮನ್ ಮಹಿಳೆಯರ ಅತ್ಯಾಚಾರ ಮಾಡಿದರಂತೆ. ಈ ವರದಿಯನ್ನೆಲ್ಲ ಮುಖ್ಯವಾಗಿ ಬ್ರಿಟನ್ ಮತ್ತು ಅಮೆರಿಕ ಸಂಸ್ಥಾನಗಳ ಪರ ತಯಾರಿಸಲಾಯಿತಾದ್ದರಿಂದ ಅವರ ಸೈನಿಕರು ಎಷ್ಟು ಅತ್ಯಾಚಾರ ನಡೆಸಿದರು ಎನ್ನುವ ಬಗೆಗೆ ಸ್ಪಷ್ಟ ಕಲ್ಪನೆ ಇಲ್ಲವಾದರೂ ಆ ಸೈನಿಕರೂ ಅತ್ಯಾಚಾರ ಮಾಡಿದರು ಎನ್ನುವುದನ್ನು ವರದಿಗಳು ಒಪ್ಪಿಕೊಂಡಿವೆ.


ಯುದ್ಧಗಳ ಮೂಲಕ ಹೆಣ್ಣನ್ನು ಲೈಂಗಿಕ ಅಡಿಯಾಳು ಮಾಡಿಕೊಂಡ ಉದಾಹರಣೆಗಳೂ ಇವೆ. ಚಾರಿತ್ರಿಕ ಅರಸರ ರಾಣೀವಾಸವೆಂದರೆ ಅಲ್ಲಿ ಸಾವಿರಾರು ತರುಣಿಯರು. ಎಷ್ಟೋ ಹುಡುಗಿಯರಿಗೆ ಮೊದಲ ದಿನದ ಬಳಿಕ ಸಾಯುವವರೆಗೂ ರಾಜನ ದರ್ಶನ ಭಾಗ್ಯ ಇರುವುದೇ ಇಲ್ಲ. ಹಾಗಾಗಿ ರಾಣೀವಾಸಗಳು ಸನ್ಯಾಸಿನಿಯರ ಮಠವಾಗಿ ಬಹುತೇಕ ಬದಲಾಗುತ್ತಿತ್ತು. ಅದರ ನಡುವೆಯೂ ಕೆಲವು ಚಾಲಾಕಿಯರು ಆಟ ಕಟ್ಟದಿರುತ್ತಿರಲಿಲ್ಲ. ಅದು ಇನ್ನೊಂದು ಮುಖ. ಬಲಾತ್ಕಾರದಿಂದ ಅರಸರು ತರುಣಿಯರನ್ನು ತಮ್ಮ ಜನಾನಾಕ್ಕೆ ಸೇರಿಸಿಕೊಳ್ಳುತ್ತಿದ್ದುದು ಇತಿಹಾಸದುದ್ದಕ್ಕೂ ನಡೆದು ಬಂದಿದೆ.


ನಮ್ಮ ಪುರಾಣದಲ್ಲಿ ಭೀಷ್ಮನು ದಾಳಿ ಮಾಡಿ ಮೂವರು ಹೆಣ್ಣುಗಳನ್ನು ಗೆದ್ದ. ಅವರನ್ನು ಒತ್ತಾಯದಿಂದ ತಮ್ಮಂದಿರಿಗೆ ಮದುವೆ ಮಾಡಿದ. ಅದರಲ್ಲಿ ಅಂಬೆ ಮಾತ್ರ ಸಿಡಿದೆದ್ದಳು. ಉಳಿದವರಿಬ್ಬರು ಪರಿಸ್ಥಿತಿಗೆ ಹೊಂದಿಕೊಂಡರು. ವಿಜಯನಗರದ ಕೃಷ್ಣದೇವರಾಯನು ಕಳಿಂಗದ ಪ್ರತಾಪರುದ್ರನನ್ನು ಗೆದ್ದ. ಕೊನೆಗೂ ಶಾಂತಿ ಒಪ್ಪಂದವಾಗಿ ಮಗಳು ಜಗನ್ಮೋಹಿನಿಯನ್ನು ಪ್ರತಾಪರುದ್ರನು ಕೃಷ್ಣದೇವರಾಯನಿಗೆ ಮದುವೆ ಮಾಡಿ ಕೊಟ್ಟ. ಜಗನ್ಮೋಹಿನಿ ಸಿಡಿದೆದ್ದಳು. ಹೀಗೆ ಒತ್ತಾಯದ ಮದುವೆಗಳು ಕೂಡ ಅತ್ಯಾಚಾರದ ಇನ್ನೊಂದು ಮುಖಗಳಾಗಿದ್ದು, ಅದು ಅನಾಹುತಗಳಿಗೆ ದಾರಿಯಾದುದೂ ಇದೆ.


ರೋಮ್ ರಾಣಿ ಬೋಡಿಕಳು ಸತ್ತಾಗ ಆಕೆಯ ಉಯಿಲು ಜಾರಿಯಾಗದಂತೆ ರೋಮ್ ಸೈನಿಕರು ನೋಡಿಕೊಂಡರು. ಅಲ್ಲದೆ ಬೋಡಿಕಳು ರಾಜನಿಂದ ಪಡೆದಿದ್ದ ಇಬ್ಬರು ಮಗಳಂದಿರನ್ನು ರೇಪ್ ಮಾಡಿದ ರೋಮನ್ ಸೈನಿಕರು ರಾಜಸತ್ತೆ ಕುಟುಂಬದೊಳಗೆ ಕೈ ಬದಲಾಗುವಂತೆ ನೋಡಿಕೊಂಡರು. ಕ್ಸೆನಿಯಾ ಬೊರಿಸೊವಾನ, ಆರ್ಟಿಮಿಸಿಯಾ ಜಂಟ್ಲಿಸಿ, ರಾಗ್ನೇಡ ಮೊದಲಾದವರ ಅತ್ಯಾಚಾರಗಳು ಚಾರಿತ್ರಿಕ ಘಟನೆಗಳಾಗಿ ದಾಖಲಾಗಿವೆ. ಇಬ್ನ್ ಎಂಬ ದಸ್ಯು ತರುಣಿಯನ್ನು ನಾರ್ಡಿಕ್ ಜನರು ತಮ್ಮ ನಾಯಕನ ಸಾವಿನ ಮೆರವಣಿಗೆ ವೇಳೆ ಗುಂಪು ಅತ್ಯಾಚಾರ ಮಾಡಿ ಕೊಂದರು. ಅದನ್ನು ರಿವಾಜು ಎಂದು ಹೇಳಲಾಯಿತು.

ಪುರಾಣಗಳು ಕೂಡ ಇದಕ್ಕೆ ಹೊರತಲ್ಲ. ಅಹಲ್ಯೆಯ ಅತ್ಯಾಚಾರ, ತುಳಸಿಯ ಅತ್ಯಾಚಾರ ಎಂದು ಭಾರತೀಯ ಪುರಾಣಗಳಲ್ಲೂ ಸಾಕಷ್ಟು ಅತ್ಯಾಚಾರ ಪ್ರಕರಣಗಳು ಸಿಗುತ್ತವೆ. ಇದು ಜಗತ್ತಿನ ಎಲ್ಲ ಪುರಾಣಗಳಲ್ಲಿಯೂ ಕಂಡು ಬರುವ ಅಂಶವಾಗಿದೆ. ಗ್ರೀಕ್ ಪುರಾಣದಂತೆ ಏರೆಸ್‍ನ ಮಗಳು ಅಲ್ಸಿಪೆಯನ್ನು ಪೊಸೈಡನ್‍ನ ಮಗ ಹಲಿರ್ತೋತಿಯಸ್ ರೇಪ್ ಮಾಡಿದ. ಚಿಯೋನ್ ಮಲಗಿದ್ದಾಗ ಹೆರ್ಮಿಸ್ ಆಕೆಯ ರೇಪ್ ಮಾಡಿದ. ಡ್ರ್ಯೋಪ್‍ಳನ್ನು ಅಪೋಲೋ ದೇವತೆಯು ಹಾವಿನ ರೂಪದಲ್ಲಿ ಬಂದು ಅತ್ಯಾಚಾರ ಮಾಡಿದ. ಗ್ರೀಕ್ ಪುರಾಣದಲ್ಲಿ ಒಂದು ನೂರರಷ್ಟು ಇಂತಾ ಅತ್ಯಾಚಾರ ಪ್ರಕರಣಗಳಿವೆ. ನಮ್ಮ ಋಷಿ ಮೂಲಕ್ಕೆ ಹೋದರೆ ಗರ್ಭಿಣಿಯನ್ನು ಅತ್ಯಾಚಾರ ಮಾಡಿದ ಕತೆ ಇದೆ. ಕಳೆದ ದಶಕದ ಗುಜರಾತಿನ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ ಇದೇ ಮಾದರಿಯದಾಗಿದೆ.


ಹೀಬ್ರೂಗಳ ಬೈಬಲ್, ನಾರ್ಡಿಕ್‍ರ ಪುರಾಣ, ರೋಮನರ ಪುರಾಣ, ಹಿಂದೂ ಪುರಾಣ, ಮಧ್ಯ ಯುಗದ ಜನಪದ ಎಂದು ಎಲ್ಲದರಲ್ಲೂ ಈ ಅತ್ಯಾಚಾರ ಮತ್ತು ಗುಂಪು ಅತ್ಯಾಚಾರದ ಕತೆಗಳು ಬರುತ್ತವೆ. ಪುರಾಣಗಳೇ ವಾಸಿ. ಅಲ್ಲಿ ಅತ್ಯಾಚಾರದ ಕತೆಗಳು ಬಂದಿವೆ. ಆದರೆ ಆಧುನಿಕವಾಗಿ ರೇಪ್ ಆಂಡ್ ಮರ್ಡರ್ ಪ್ರಕರಣಗಳು ದಿನ ನಿತ್ಯ ಎನ್ನುವಂತೆ ವರದಿಯಾಗುತ್ತಿವೆ. ರೋಮನರ ಪುರಾಣದಂತೆ ರಿಯಾ ಸಿಲ್ವಿಯಾಳನ್ನು ಮಂಗಳನು ಅತ್ಯಾಚಾರ ಮಾಡಿದನಂತೆ. ಹಿಂದೂ ಪುರಾಣದಂತೆ ಅರಜಳನ್ನು ದಂಡನು ಅತ್ಯಾಚಾರ ಮಾಡಿದನಂತೆ. ಇವೆಲ್ಲ ಕೊನೆಯಿಲ್ಲದ ಪಟ್ಟಿಗಳು. ಮಾನವನು ತನ್ನನ್ನು ಮೃಗವಾಗಿಸಿಕೊಂಡಾಗ ಇವೆಲ್ಲ ನಡೆಯುತ್ತವೆ.

Related Posts

Leave a Reply

Your email address will not be published.