ಬೆಳ್ವೆ ಗುಮ್ಮಹೊಲ ಚರ್ಚ್ ಫಾದರ್ ಬದಲಾವಣೆಗೆ ಆಗ್ರಹ ನ್ಯಾಯ ಸಿಗದಿದ್ದರೆ ಕ್ರೈಸ್ತ ಧರ್ಮ ತೊರೆಯಲೂ ಸಿದ್ಧ

ಕುಂದಾಪುರ: ಬೆಳ್ವೆಯ ಗುಮ್ಮಹೊಲ ಎಂಬಲ್ಲಿನ ಸಂತ ಜೋಸೆಫರ ಚರ್ಚ್ ಧರ್ಮಗುರುಗಳು ಭಕ್ತಾದಿಗಳಿಗೆ ಅವಹೇಳನ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಚರ್ಚ್ ಮುಂಭಾಗ ಭಕ್ತರು ಪ್ರತಿಭಟನೆ ನಡೆಸಿದ್ದು, ವಾರದೊಳಗೆ ಧರ್ಮಗುರುಗಳ ಬದಲಾವಣೆ ಮಾಡದಿದ್ದಲ್ಲಿ ಪ್ರತಿಭಟನೆ ಜೊತೆಗೆ ಕ್ರೈಸ್ತ ಧರ್ಮ ತ್ಯಜಿಸುವ ಎಚ್ಚರಿಕೆ ನೀಡಿದ್ದಾರೆ.

ಸುಮಾರು 60 ವರ್ಷಗಳ ಇತಿಹಾಸವಿರುವ ಉಡುಪಿ ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲದ ಸಂತ ಜೋಸೆಫರ ಚರ್ಚ್ಗೆ ಕಳೆದ 3 ತಿಂಗಳ ಹಿಂದೆ ಗುರುಗಳಾಗಿ ಬಂದ ಅಲೆಕ್ಸಾಂಡರ್ ಲೂವಿಸ್ ಅವರು ಭಕ್ತಾದಿಗಳಿಗೆ ಅವಹೇಳನ ಮಾಡಿದ್ದಲ್ಲದೆ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಅಧಿಕಾರ ದುರುಪಯೋಗಪಡಿಸಿಕೊಂಡು ಐಷಾರಾಮಿ ಜೀವನಕ್ಕಾಗಿ ಭಕ್ತರ ಮನಸ್ಸಿಗೆ ಘಾಸಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥ ಪ್ರವೀಣ್ ಲೋಬೋ, ಭಕ್ತರು ಈ ಬಗ್ಗೆ ಶಂಕರನಾರಾಯಣ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಧರ್ಮಪ್ರಾಂತ್ಯದ ಆಡಳಿತ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಫಾದರ್ ಪರವಾಗಿಯೇ ಇದ್ದಾರೆ ಎಂದು ಕೂಡ ಗಂಭೀರ ಆರೋಪ ಮಾಡಿದ್ದಾರೆ.

ವರ್ಗಾವಣೆಗೆ ಒಂದು ವಾರದ ಗಡುವು ನೀಡಿದ ಭಕ್ತರು:

ಭಕ್ತರಿಗೆ ಬೇಡವಾದ ಗುಮ್ಮಹೊಲ ಚರ್ಚ್ ಗುರುಗಳ ಬಗ್ಗೆ ನಿಯೋಗವೊಂದು ಬಿಷಪ್ ಅವರನ್ನು ಖುದ್ದು ಭೇಟಿಯಾಗಿ ಮನವರಿಕೆ ಮಾಡಿದರೂ ಬಿಷಪ್ ಅವರು ಕೂಡ ಮೃದು ಧೋರಣೆ ತೋರುತ್ತಿರುವುದು ಸಹಜವಾಗಿಯೇ ಚರ್ಚ್ ನಂಬಿಕೊಂಡು ಬಂದ 32 ಕುಟುಂಬಗಳ ಕ್ರೈಸ್ತ ಸಮುದಾಯದವರನ್ನು ನೋಯಿಸಿದೆ. ಗುಮ್ಮಹೊಲದ ಚರ್ಚ್ ಗುರುಗಳನ್ನು ಒಂದು ವಾರದೊಳಗೆ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಬಿಷಪ್ ಕಚೇರಿಯೆದುರು ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಭಾನುವಾರ ಚರ್ಚ್ ಎದುರು ನಡೆಸಿದ ಖಂಡನಾ ಸಭೆಯಲ್ಲಿ ಒಕ್ಕೋರಲ ಅಭಿಪ್ರಾಯ ಕೇಳಿಬಂತು. ಅಲ್ಲದೆ ಗ್ರಾಮಪಂಚಾಯತಿಗೆ ಮನವಿ ಸಲ್ಲಿಸಲಾಯಿತು.

ಬೆಳ್ವೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಮಾಜಿ ಅಧ್ಯಕ್ಷರಾದ ವೈ. ಕರುಣಾಕರ ಶೆಟ್ಟಿ, ಉದಯ ಪೂಜಾರಿ, ಶಾಂತಿ ಡೇಸಾ, ಸಿಲ್ವಿಯಾ ಪೆÇ್ಲರೆಸ್, ಸ್ಯಾಂಡ್ರಾ ಸ್ಯಾಮ್ಸನ್, ಪ್ರೇಮ್ ಪ್ಲೊರೆಸ್ ಆಗ್ರಹಿಸಿದರು.

Related Posts

Leave a Reply

Your email address will not be published.