ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದದಲ್ಲಿ ಡಿ.21 ರಿಂದ 26 ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಭಾನುವಾರ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಕಳೆದ ಕೊರೊನಾ ಮಹಾಮಾರಿಯಿಂದಾಗಿ ಎರಡು ಬಾರಿ ಮುಂದೂಡಲ್ಪಟ್ಟ ಬ್ರಹ್ಮಕಲಶೋತ್ಸವವನ್ನು ಡಿ.21 ರಿಂದ ಆರು ದಿನಗಳ ಕಾಲ ನಡೆಸಲಾಗುವುದು. ಈ ಕುರಿತು ಕೆಮ್ಮಿಂಜೆ ನಾಗೇಶ ತಂತ್ರಿಯವರ ಮಾರ್ಗದರ್ಶನದಲ್ಲಿ, ಉಡುಪಿ ಕುಮಾರ ತಂತ್ರಿಯವರ ನೇತೃತ್ವದಲ್ಲಿ ಇತ್ತೀಚೆಗೆ ಪ್ರಶ್ನಾ ಚಿಂತನೆಯನ್ನು ನಡೆಸಿ ಬ್ರಹ್ಮಕಲಶೋತ್ಸವ ಪೂರ್ವಭಾವಿಯಗಿ ಪೂಜಾ ವಿಧಿವಿಧಾನಗಳನ್ನು ನಡೆಸಲಾಗಿದೆ. ಈ ಹಿಂದೆ ಯಾವ ರೀತಿ ನಿಗದಿಯಾಗಿದೆ ಅದರಂತೆ ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುವುದು ಎಂದು ತಿಳಿಸಿದರು.

ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಕಡೆಗಳಿಂದ ರಸ್ತೆಗಳನ್ನು ಅಲಂಕಾರ ಮಾಡಲಾಗುವುದು. ಪೆರ್ನೆ-ಕೋಡಿಂಬಾಡಿ, ಕೋಡಿಂಬಾಡಿ ಶಾಲಾ ಬಳಿಯಿಂದ ದೇವಸ್ಥಾನ, ಶಾಂತಿನಗರ-ದೇವಸ್ಥಾನ ಬೀದಿಗಳನ್ನು ಗೂಡುದೀಪಗಳಿಂದ ಅಲಂಕರಿಸಲಾಗುವುದು. ಪುತ್ತೂರಿನ ಬೊಳುವಾರಿನಿಂದ ಬಂಟಿಂಗ್ಸ್ಗಳನ್ನು ದೇವಸ್ಥಾನದ ತನಕ ಅಳವಡಿಸುವ ಕಾರ್ಯ ಆಯಾ ಪ್ರದೇಶದ ಭಜನಾ ತಂಡ, ಸಂಘಟನೆಗಳವರ ನೇತೃತ್ವದಲ್ಲಿ ನಡೆಯಲಿದೆ. ಈ ಕುರಿತು ವಿನಂತಿಸಲಾಗುವುದು.

ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಬರುವ ಭಕ್ತಾದಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡುವಂತೆ ಈಗಾಗಲೇ ಸಾರಿಗೆ ಸಚಿವ ಶ್ರೀರಾಮುಲು ಅವರಲ್ಲಿ ವಿನಂತಿಸಲಾಗಿದೆ ಎಂದು ಅವರು ತಿಳಿಸಿದರು. ಒಟ್ಟಾರೆಯಾಗಿ ಬ್ರಹ್ಮಕಲಶೋತ್ಸವದಲ್ಲಿ ನಡೆಯುವ ಅನ್ನಸಂತರ್ಪಣೆಯಾಗಲಿ, ಸಾಂಸ್ಕೃತಿಕ, ಸಭಾ ಕಾರ್ಯಗಳಾಗಲಿ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ಚೌಕಟ್ಟಿನಲ್ಲಿ ಮಾಡುವ ಕುರಿತು ಯೋಜನೆಗಳನ್ನು ಹಾಕಲಾಗಿದೆ ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೋಶಾಧಿಕಾರಿ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ನಾಯಕ್ ನಿಡ್ಯ ಉಪಸ್ಥಿತರಿದ್ದರು. ಕೋಡಿಂಬಾಡಿ ಗ್ರಾಪಂ ಸದಸ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಜಯಪ್ರಕಾಶ್ ಬದಿನಾರು ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಬೀದಿ ಅಲಂಕಾರ ಸಮಿತಿ ಸಂಚಾಲಕ ಅಶೋಕ್ ದಡಿಕೆತ್ತಾಯ, ವೇದಿಕೆ ಅಲಂಕಾರ ಸಮಿತಿಯ ಜಗದೀಶ್, ಆರ್ಥಿಕ ಸಮಿತಿಯ ರಾಜೀವ ಶೆಟ್ಟಿ ಕೇದಗೆ ಮತ್ತಿತರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related Posts

Leave a Reply

Your email address will not be published.