ಬಂಟ್ವಾಳ: ರಸ್ತೆ ಬದಿಯೇ ಡಂಪಿಂಗ್ ಯಾರ್ಡ್: ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದು ಅನಾಗರಿಕ ಪ್ರವೃತ್ತಿ

ಬಂಟ್ವಾಳ ತಾಲೂಕಿನ ಬಹುತೇಕ ಭಾಗಗಳಲ್ಲಿ ರಸ್ತೆ ಇಕ್ಕೆಲಗಳು, ಇಳಿಜಾರು ಗುಂಡಿಗಳು ಕಸ ಎಸೆಯುವ ತಾಣಗಳಾಗುತ್ತಿದೆ. ಕೊಳೆಯುವ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಾಹನಗಳಲ್ಲಿ ಬಂದು ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗುವ ಅನಾಗರಿಕ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೆ, ಅಂಗಡಿಗಳ ತ್ಯಾಜ್ಯಗಳು ರಸ್ತೆ ಬದಿಗಳಲ್ಲಿ ಎಸೆಯುತ್ತಿರುವ ಪರಿಣಾಮ ಸುತ್ತಮುತ್ತಲ ಪ್ರದೇಶ ದುರ್ವಾಸನೆ ಬೀರುತ್ತಿದೆ. ಜನರಲ್ಲಿ ಸ್ವಚ್ಚತೆಯ ಪರಿಕಲ್ಪನೆ ಕೇವಲ ಅಕ್ಟೋಬರ್ 2ರ ಸ್ವಚ್ಛತಾ ದಿನಕ್ಕೆ ಮಾತ್ರ ಸೀಮಿತವಾದಂತಿದೆ!

ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹದ ವ್ಯವಸ್ಥೆ ಇದ್ದರೂ ಕೂಡ ನಗರ ವ್ಯಾಪ್ತಿಯ ರಸ್ತೆ ಇಕ್ಕೆಲಗಳು ತ್ಯಾಜ್ಯರಾಶಿಯಿಂದ ಮುಕ್ತವಾಗಿಲ್ಲ. ವಿದ್ಯಾವಂತರೇ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ರಸ್ತೆ ಪಕ್ಕವೇ ಕಸ ರಾಶಿ ಬಿದ್ದು ಡಂಪಿಂಗ್ ಯಾರ್ಡ್‌ನಂತೆ ಕಾಣಿಸುತ್ತದೆ. ಸೀಮಿತ ಸ್ಥಳವಕಾಶದಲ್ಲಿ ಮನೆ ಇರುವವರು, ಫ್ಲಾಟ್‌ಗಳಲ್ಲಿ ವಾಸಿಸುವವರು, ಕೋಳಿ ಅಂಗಡಿ, ತರಕಾರಿ ಅಂಗಡಿಯವರು, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ರಸ್ತೆ ಬದಿ ಎಸೆದು ಜವಾಬ್ದಾರಿ ಮರೆಯುತ್ತಿದ್ದರೆ. ಪುರಸಭೆಯ ವಾಹನಗಳಿಗೆ ಕಸ ನೀಡುವ ಕೆಲ ಮನೆಯವರು ಹಸಿ ಕಸ, ಒಣಕಸ, ಅಪಾಯಕಾರಿ ಕಸವೆಂದು ವಿಂಗಡಿಸದೇ ನೀಡುತ್ತಾರೆ. ಇದರಿಂದಾಗಿ ನಗರ ಸ್ವಚ್ಚತೆಯ ಪರಿಕಲ್ಪನೆ ಸಾಕಾರಗೊಳ್ಳುತಿಲ್ಲ. ಜಾನುವಾರು, ಬೀದಿ ನಾಯಿಗಳು, ತ್ಯಾಜ್ಯ ರಾಶಿಯಲ್ಲಿಯೇ ಆಹಾರವನ್ನು ಹುಡುಕವ ಬರದಲ್ಲಿ ಅವುಗಳ ಹೊಟ್ಟೆಗೂ ಪ್ಲಾಸ್ಟಿಕ್ ತ್ಯಾಜ್ಯಗಳು ಸೇರುತ್ತಿವೆ.

ಪಾಣೆಮಂಗಳೂರು ಪೇಟೆ:

ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಿಂದ ಹಳೆ ಸೇತುವೆ ಸಂಪರ್ಕ ರಸ್ತೆಯ ಇಕ್ಕೆಲಗಳ ಇಳಿಜಾರು ಪ್ರದೇಶಗಳಲ್ಲಿ ಕಸದ ರಾಶಿ ತುಂಬಿ ಹೋಗಿದೆ. ಕೊಳೆತ ತ್ಯಾಜ್ಯದಿಂದಾಗಿ ಪಾಣೆಮಂಗಳೂರು ಪೇಟೆಗೆ ಬರುವವರು ಮೂಗು ಮುಚ್ಚಿಕೊಂಡು ಬರುವ ಸ್ಥಿತಿ ನಿರ್ಮಾಣಗೊಂಡಿದೆ.

ಲೊರೆಟ್ಟೋಪದವು:

ಬಂಟ್ವಾಳ ಮೂಡಬಿದರೆ ರಸ್ತೆಯ ಲೊರೆಟ್ಟೋ ಪದವು ಬಳಿ ರಸ್ತೆ ಪಕ್ಕ ಕಸದ ರಾಶಿ ಇದೆ. ಎಷ್ಟೇ ಸ್ವಚ್ಚಗೊಳಿಸಿದರೂ ಪದೇ ಪದೇ ಅಲ್ಲಿ ಕಸ ಬೀಳುತ್ತಿದ್ದುದರಿಂದ ಪುರಸಭೆ ಆ ಜಾಗದಲ್ಲಿ ಸಿಸಿ ಟಿವಿಯನ್ನು ಅಳವಡಿಸಿತ್ತು. ವಿಪರ್ಯಾಸವೆಂದರೆ ಸಿಸಿ ಟಿವಿಯ ಮುಂಭಾಗದಲ್ಲೇ ಕಸ ಬಿದ್ದರೂ ಕಸ ಎಸೆಯುವವರ ವಿರುದ್ಧ ಯಾವುದೇ ಕ್ರಮ ಜರುಗಿಸದ ಕಾರಣ ಸಿಸಿ ಟಿವಿ ಇದ್ದು ಪ್ರಯೋಜವಿಲ್ಲದಂತಾಗಿದ್ದು ಇದೀಗ ಸಿಸಿ ಟಿವಿಯೂ ಕಾಣಿಸುತ್ತಿಲ್ಲ. ಪ್ಲಾಸ್ಟಿಕ್ ಚೀಲಗಳ ಜೊತೆ ಕೋಳಿ ತ್ಯಾಜ್ಯಗಳು, ಬಿಯರ್ ಬಾಟಲ್‌ಗಳು ತುಂಬಿಕೊಂಡಿದೆ. ಗ್ರಾಮೀಣ ಭಾಗದಿಂದ ನಗರದತ್ತ ಬರುವವರು ಇಲ್ಲಿ ಮನೆಯ ತ್ಯಾಜ್ಯವನ್ನು ಸುರಿಯುತ್ತಾರೆ.

ಅಕ್ಕರಂಗಡಿ:

ಇಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎನ್ನುವ ಪುರಸಭೆಯ ಸೂಚನಾ ಫಲಕದ ಬಳಿಯೇ ಕಸದ ರಾಶಿ ಇದೆ. ಸೂಚನಾ ಫಲಕದಲ್ಲಿರುವ ಕನ್ನಡ ಅಕ್ಷರಗಳನ್ನು ಓದಲು ಬಾರದವರು ಕಸ ಎಸೆಯುತ್ತಾರೋ ಅಥವಾ ಎಸೆದರೆ ಏನಾಗುತ್ತದೆ ಎನ್ನುವ ದಾರ್ಷ್ಯವೋ ಗೊತ್ತಿಲ್ಲ. ಸ್ಥಳಿಯಾಡಳಿತ ನೀಡುವ ಸೂಚನೆಯನ್ನು ಧಿಕ್ಕರಿಸಿ ಪರಿಸರದ ಸ್ವಚ್ಚತೆಯನ್ನು ಹಾಳು ಮಾಡುತ್ತಿದ್ದಾರೆ.

ಕಾಮಾಜೆ ರಸ್ತೆಯಲ್ಲಿ ಕೊಳಕು:

ಮೊಡಂಕಾಪುವಿನಿಂದ ಕಾಮಾಜೆಗೆ ಬರುವ ಸುಂದರವಾದ ಕಾಂಕ್ರೀಟ್ ರಸ್ತೆಯ ಪಕ್ಕ ಅಲ್ಲಲ್ಲಿ ಕಸದ ರಾಶಿ ಇದೆ. ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ತುಂಬಿಸಿ ಪುರಸಭೆಯ ಪೌರಕಾರ್ಮಿಕರಿಗೆ ನೀಡುವ ಬದಲು ರಸ್ತೆ ಬದಿ ಎಸೆದು ಹೋಗಲಾಗಿದೆ.

ಮಾರ್ನಬೈಲು ರಸ್ತೆ ಬದಿ:

ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ರಸ್ತೆ ಬದಿ ಕೊಳಚೆಯ ತಾಣವಾಗಿದೆ. ಇದೇ ಸ್ಥಳದಲ್ಲಿ ಸ್ವಲ್ಪ ಮುಂದೆ ಹೋದರೆ ಮಾರಣಗುಳಿಗ ಕಟ್ಟೆಯಿದೆ. ಸಂಚಾರಿ ಪೊಲೀಸ್ ಠಾಣೆಯೂ ಇದೆ. ಮೊದಲು ಈ ಕಸ ಪುರಸಭಾ ವ್ಯಾಪ್ತಿಯ ಗುಡ್ಡೆಯಂಗಡಿ ಬಳಿ ರಾಶಿ ಬೀಳುತ್ತಿತ್ತು. ಅಲ್ಲಿ ಪುರಸಭೆ ಸಿಸಿ ಟಿವಿ ಅಳವಡಿಸಿದ ಬಳಿಕ ಕಸ ಎಸೆಯುವವರು ಸ್ಥಳ ಬದಲಾಯಿಸಿ ಮಾರ್ನಬೈಲು ಬಳಿ ಇಳಿಜಾರು ಗುಂಡಿಗೆ ಎಸೆಯುತ್ತಾರೆ. ಅದೀಗ ತುಂಬಿಕೊಂಡು ರಸ್ತೆಯನ್ನು ಆಕ್ರಮಿಸಿಕೊಂಡಿದೆ. ಜನ ಕಸ ಎಸೆಯುತ್ತಾ ಪರಿಸರಕ್ಕೆ ಹಾನಿ ಮಾಡುತ್ತಿದ್ದರೂ ಸ್ಥಳೀಯ ಪಂಚಾಯತಿ ಮೌನವಾಗಿದೆ.

ನಂದಾವರ ತಿರುವ ರಸ್ತೆ:

ಸಜೀಪಮುನ್ನೂರು ಗ್ರಾಮದ ಮಾರ್ನಬೈಲಿನಿಂದ ನಂದಾವರ ತಿರುವು ಪಡೆಯುವ ಬಳಿಯೂ ರಸ್ತೆ ಬದಿ ಕೊಚ್ಚೆ ತುಂಬಿಕೊಂಡಿದೆ. ದೇವಸ್ಥಾನಕ್ಕೆ, ಮಸೀದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಗಳು ವಾಕರಿಕೆ ಹುಟ್ಟಿಸುತ್ತಿದೆ.

ಕಲ್ಪನೆ ಇಳಿಜಾರು ರಸ್ತೆ:

ಕಲ್ಪನೆಯಿಂದ ಪಚ್ಚಿನಡ್ಕ ಬರುವ ರಸ್ತೆಯ ಇಳಿಜಾರು ಪ್ರದೇಶ ತ್ಯಾಜ್ಯಪುರವಾಗಿದೆ. ಬೆಂಜನಪದವು, ಕಲ್ಪನೆ ಮತ್ತಿತರ ಭಾಗಗಳಿಂದ ಬರುವ ಜನರು ಇಲ್ಲಿ ಕಸದ ಹಾಕಿ ಮಿನಿ ಡಂಪಿಂಗ್ ಯಾರ್ಡ್ ಆಗಿದೆ. ಇದೀಗ ಸ್ಥಳೀಯ ಪಂಚಾಯತಿ ಆ ಸ್ಥಳದಲ್ಲಿ ಸಿಸಿ ಟಿವಿ ಹಾಕಿ ಇದ್ದ ಕಸವನ್ನು ತೆರವುಗೊಳಿಸಿದೆ. ಮುಂದಿನ ದಿನಗಳಲ್ಲಿ ಕಸ ಬೀಳುವುದು ಕಡಿಮೆಯಾಗುತ್ತದೆಯೋ ಎನ್ನುವುದನ್ನು ನೋಡಬೇಕಷ್ಟೆ.

Related Posts

Leave a Reply

Your email address will not be published.