ಮರವಂತೆಯಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮ
ಕುಂದಾಪುರ: ಎಲ್ಲೆಡೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಬಿಜೆಪಿ ದುರಾಡಳಿತದಿಂದ ರೋಸಿಹೋಗಿ, ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಬಗ್ಗೆ ಮಾತನಾಡುತ್ತಿದ್ದಾರೆ. ಯುವಜನರು ಕಾಂಗ್ರೆಸ್‌ನತ್ತ ಮುಖಮಾಡುತ್ತಿದ್ದಾರೆ. ಇದು ಪಕ್ಷದ ನಾಯಕರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಮರವಂತೆಯಲ್ಲಿ ಭಾನುವಾರ ನಡೆದ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರುಬಿಜೆಪಿ ಆಡಳಿತ ಬಂದ ಬಳಿಕ ಬಡವರ ವಸತಿ ಯೋಜನೆ, ೯೪ ಸಿ ಹಕ್ಕುಪತ್ರ ವಿತರಣೆ ಸ್ಥಗಿತವಾಗಿದೆ. ಅದನ್ನ ತಕ್ಷಣ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಶೀಘ್ರ ಹೋರಾಟ ನಡೆಸಲಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಆಶೀರ್ವಾದ ಸದಾ ಇದೆ. ಅವರ ಬೆಂಬಲದಿಂದ ಸಂಘಟನೆಯನ್ನು ಬಲಪಡಿಸಿ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳ ಕಾರ್ಯಕರ್ತರನ್ನು ನೇರವಾಗಿ ಸಂಪರ್ಕಿಸಿ ಗ್ರಾಮೀಣ ಕಾಂಗ್ರೆಸ್ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಪಕ್ಷದ ಪ್ರಮುಖರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎಸ್. ರಾಜು ಪೂಜಾರಿ, ಗೌರಿ ದೇವಾಡಿಗ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದ ಅಡಿ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿ, ಅವು ಅಧಿಕಾರದಲ್ಲಿ ಮುಂದುವರಿದರೆ ಜನರು ಇನ್ನಷ್ಟು ಬವಣೆಪಡಬೇಕಾಗುತ್ತದೆ ಎಂದರು.
ಕಾರ್ಯಕರ್ತರಾದ ಜನಾರ್ದನ ಖಾರ್ವಿ, ಶಂಕರ ಪೂಜಾರಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲವು ಸಲಹೆ ನೀಡಿದರು. ಗ್ರಾಮೀಣ ಕಾಂಗ್ರೆಸ್ ನಿರ್ಗಮನ ಅಧ್ಯಕ್ಷ ಪುಟ್ಟಯ್ಯ ಪೂಜಾರಿ ನೂತನ ಅಧ್ಯಕ್ಷ ಗಣೇಶ ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಎಂ. ವಿನಾಯಕ ರಾವ್ ಸ್ವಾಗತಿಸಿ ವಂದಿಸಿದರು. ರಾಜೇಶ ದೇವಾಡಿಗ, ನಾಗರಾಜ ಗಾಣಿಗ ಇದ್ದರು.
ಸಭೆಯ ಪೂರ್ವದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರು ಶೀಘ್ರ ಗುಣಮುಖರಾಗಲೆಂದು ಶ್ರೀ ದುರ್ಗಾ ಯಕ್ಷೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.