ಮೂಡುಬಿದಿರೆ : ಅಕ್ರಮ ಗ್ರಾನೈಟ್ ಕಲ್ಲು ಕೋರೆಗೆ ದಾಳಿ
ತಾಲೂಕಿನ ಪಡುಮಾರ್ನಾಡು ಗ್ರಾ.ಪಂಚಾಯತ್ ವ್ಯಾಪ್ತಿಯ ತಂಡ್ರಕೆರೆ ಗಂಪದಡ್ಕ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗ್ರಾನೈಟ್ ಕಲ್ಲಿನ ಕೋರೆಗೆ ಮೂಡುಬಿದಿರೆ ತಹಶೀಲ್ದಾರ್ ಅವರು ಸಾರ್ವಜನಿಕರ ಸಹಕಾರದೊಂದಿಗೆ ದಾಳಿ ನಡೆಸಿ ಗ್ರಾನೈಟ್ ತುಂಬಿದ ಲಾರಿ, ಹಿಟಾಚಿ ಮತ್ತು ಕಲ್ಲು ಕೊರೆಯುವ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ 20 ದಿನಗಳಿಂದ ಇಲ್ಲಿ ಅಕ್ರಮವಾಗಿ ಬೆಲೆಬಾಳುವ ಬೃಹತ್ ಗ್ರಾನೈಟ್ ಕಲ್ಲಿನ ಕೋರೆ ನಡೆಯುತ್ತಿತ್ತು ಈ ಬಗ್ಗೆ ಸಾರ್ವಜನಿಕರು ತಹಶೀಲ್ದಾರ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಗಮನಕ್ಕೆ ತಂದಿದ್ದರು. ಈ ಸಂದರ್ಭ ತಹಶೀಲ್ದಾರ್ ಅವರು ಭೇಟಿ ನೀಡಿದಾಗ ಅಲ್ಲಿ ಅಡಿಕೆ ಸಸಿಗಳನ್ನು ನೆಡಲು ಹೊಂಡಗಳನ್ನು ತೆಗೆಯಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದರು. ಆದರೆ ಇದೀಗ ಗ್ರಾನೈಟ್ ಕಲ್ಲನ್ನು ತೆಗೆದು 10ವ್ಹೀಲ್ ಲಾರಿಗಳಲ್ಲಿ ದಿನಕ್ಕೆ ಎರಡು ಮೂರು ಬಾರಿ ಎಂಬಂತೆ ಸಾಗಾಟ ನಡೆಯುತ್ತಿತ್ತು ಅಲ್ಲದೆ ಕಲ್ಲನ್ನು ಕೊರೆದ ಜಾಗವು ಮಿನಿ ಬಳ್ಳಾರಿಯಂತೆ ಮಾರ್ಪಾಡಾಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತಹಶೀಲ್ದಾರ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಅದರಂತೆ ತಹಶೀಲ್ದಾರ್ ಅವರು ದಾಳಿ ನಡೆಸಲು ಹೊರಟಿದ್ದರು. ಈ ಸಂದರ್ಭ ಗ್ರಾನೈಟ್ ಕಲ್ಲು ತುಂಬಿದ ಲಾರಿಯೊಂದು ಓಣಿ ರಸ್ತೆಯಲ್ಲಿ ಹೋಗುತ್ತಿರುವುದನ್ನು ಗಮನಿಸಿ ಬೆನ್ನಟ್ಟಿಕೊಂಡು ಹೋದಾಗ ಲಾರಿಯನ್ನು ಬಿಟ್ಟು ಚಾಲಕ ಮತ್ತು ಇನ್ನೋರ್ವ ವ್ಯಕ್ತಿ ಓಡಿ ತಪ್ಪಿಸಿಕೊಂಡಿದ್ದಾರೆ. ಅಗ ಲಾರಿಯನ್ನು ವಶ ಪಡಿಸಿಕೊಳ್ಳಲಾಗಿದೆ ಮತ್ತು ಕೋರೆಯಲ್ಲಿದ್ದ ಯಂತ್ರಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಈ ಕೋರೆಯನ್ನು ಹಾಸನ ಮೂಲದ ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದಾರೆ ಎಂಬುದಷ್ಟೇ ಮಾಹಿತಿ ಇದೆ ಅಲ್ಲದೆ ಗ್ರಾನೈಟ್ ಕಲ್ಲನ್ನು ಸಮುದ್ರಕ್ಕೆ ಬಳಸಲು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಪುಕ್ಸಟೆ ಮಾತುಗಳು ಹರಿದಾಡುತ್ತಿವೆ. ಗ್ರಾನೈಟ್ ಕೋರೆ ನಡೆಯುತ್ತಿರುವ ಜಾಗ ಯಾರಿಗೆ ಸಂಬಂಧ ಪಟ್ಟಿದ್ದು, ಎಷ್ಟು ಜಾಗವನ್ನು ಅತಿಕ್ರಮಣ ಮಾಡಿ ಕೋರೆ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ತಿಳಿಯಲು ಸರ್ವೆಕಾರ್ಯ ನಡೆಯುತ್ತಿದೆ. ಈ ಕೋರೆ ಪ್ರಕರಣವನ್ನು ಪತ್ತೆ ಹಚ್ಚಿ ಇಲಾಖೆಗಳಿಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ನ್ಯಾಯ ಸಿಗಬಹುದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.