ಮೂಲಭೂತ ಸೌಕರ್ಯ ವಂಚಿತ ಸಿರಿಬಾಗಿಲು: ಸೇತುವೆ ಇಲ್ಲದೆ ಗ್ರಾಮದ ಜನರ ಪರದಾಟ

ಮಳೆಗಾಲ ಬಂತೆಂದರೆ ಸಾಕು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಿರಿಬಾಗಿಲು ಎನ್ನುವ ಗ್ರಾಮ ಇತರ ಪ್ರದೇಶಗಳ ಸಂಪರ್ಕವನ್ನೇ ಕಳೆದುಕೊಂಡು ದ್ವೀಪವಾಗಿ ಬಿಡುತ್ತದೆ. ಶಿರಾಢಿಘಾಟ್ ನ ಮಧ್ಯಭಾಗದಲ್ಲಿರುವ ಈ ಗ್ರಾಮದ ಸುತ್ತ ಮೂರು ಹೊಳೆಗಳು ಹರಿಯುತ್ತಿದೆ, ಸೇತುವೆಯಿಲ್ಲದ ಕಾರಣ ಮಳೆಗಾಲದಲ್ಲಿ ಈ ಹೊಳೆಗಳು ತುಂಬಿ ಹರಿಯುವ ಕಾರಣ ಇಲ್ಲಿನ ಜನರಿಗೆ ಅಗತ್ಯ ಕಾರ್ಯಗಳಿಗಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗಲಾರದ ಸಮಸ್ಯೆ ಇಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬಾರು ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಸಿರಿಬಾಗಿಲು ಗ್ರಾಮ. ಹೆಸರಿಗೆ ಇದು ಸಿರಿ ಬಾಗಿಲಾಗಿದ್ದರೂ,ಇಲ್ಲಿ ಮೂಲಭೂತ ವ್ಯವಸ್ಥೆಗಳ ದಾರಿದ್ರ್ಯವಿದೆ. ಇಲ್ಲಿನ ಪುಟ್ಟ ಮಕ್ಕಳು ಅಂಗನವಾಡಿಗೆ ಹೋಗಬೇಕೆಂದರೆ ಸುಮಾರು ೪ ಕಿಲೋಮೀಟರ್ ಗಳಷ್ಟು ನಡೆದೇ ಹೋಗಬೇಕಾದರೆ, ಹೈಸ್ಕೂಲ್ ಮಕ್ಕಳು ಐದು ಕಿಲೋಮೀಟರ್ ಗಳಷ್ಟು ಕಾಡು ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆಯಿದೆ. ಇದು ಈ ಗ್ರಾಮದ ಬೇಸಿಗೆ ಋತುವಿನ ಕಥೆಯಾದರೆ, ಮಳೆಗಾಲದಲ್ಲಿ ಈ ವ್ಯವಸ್ಥೆಯನ್ನೂ ಇಲ್ಲಿನ ಜನ ಕಳೆದುಕೊಳ್ಳುತ್ತಾರೆ. ಹೌದು ದಟ್ಟ ಕಾಡುಗಳ ನಡುವೆಯೇ ಇರುವ ಈ ಗ್ರಾಮದ ಮಧ್ಯದಲ್ಲಿ ಮೂರು ಹೊಳೆಗಳು ಹರಿಯುತ್ತಿದ್ದು, ಮಳೆಗಾಲದಲ್ಲಿ ಈ ಹೊಳೆಗಳಲ್ಲಿ ನೀರಿನ ಮಟ್ಟ ವಿಪರೀತ ಏರಿಕೆಯಾಗುವುದರಿಂದಾಗಿ ಇಲ್ಲಿನ ಜನ ಒಂದೆಡೆಯಿಂದ ಇನ್ನೊಂದೆಡೆಗೆ ಸಂಪರ್ಕವಿಲ್ಲದೆ ದ್ವೀಪದ ನಿವಾಸಿಗಳಂತೆ ಮಾರ್ಪಡುತ್ತಾರೆ. ಹಲವು ಬಾರಿ ತಮ್ಮ ಸಮಸ್ಯೆಗಳಿಗೆ ಮುಕ್ತಿ ದೊರಕಿಸಿಕೊಡುವಂತೆ ಸ್ಥಳೀಯ ಆಡಳಿತ, ಎಂ.ಎಲ್.ಎ ಸೇರಿದಂತೆ ಹಲವರಿಗೆ ಸಾಕಷ್ಟು ಮನವಿಗಳನ್ನು ಮಾಡಿದರೂ, ಇಲ್ಲಿನ ಜನರ ಸಮಸ್ಯೆಗೆ ಈವರೆಗೂ ಪರಿಹಾರ ದೊರೆತಿಲ್ಲ. ಮಳೆಗಾಲದ ಸಂದರ್ಭದಲ್ಲಿ ಈ ಗ್ರಾಮದ ಜನರೇನಾದರೂ ಅನಾರೋಗ್ಯಪೀಡಿತರಾದಲ್ಲಿ, ವೈದ್ಯಕೀಯ ಚಿಕಿತ್ಸೆ ಎನ್ನುವುದು ಇಲ್ಲಿನ ಗ್ರಾಮದ ಜನರಿಗೆ ಮರೀಚಿಕೆಯೇ ಆಗುತ್ತದೆ. ಗ್ರಾಮೀಣಾಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋಟ್ಯಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತದೆಯಾದರೂ ಇಂಥ ಗ್ರಾಮಗಳನ್ನು ಅವುಗಳು ಇಂದಿಗೂ ಮುಟ್ಟಿಲ್ಲ.

ಇಲ್ಲಿನ ಜನ ವಿಧ್ಯಾಭ್ಯಾಸಕ್ಕಾಗಿ ತಮ್ಮ ಮಕ್ಕಳನ್ನು ಬೇರೆ ಪ್ರದೇಶಗಳಲ್ಲಿ ಬಿಟ್ಟು ಓದಿಸಬೇಕಾದಂತಹ ಪರಿಸ್ಥಿತಿಯನ್ನು ಎದುರಿಸಿಕೊಂಡು ಬರುತ್ತಿದ್ದಾರೆ. ಕಾಲೇಜಿಗೆ ಹೋಗುವ ಹಲವು ವಿಧ್ಯಾರ್ಥಿಗಳು ಇಲ್ಲಿದ್ದರೂ , ಕಾಡುದಾರಿಯಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ಹಾಗೂ ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲೇ ಒದಬೇಕಾದ ಅನಿವಾರ್ಯತೆ ಇವರದಾಗಿದೆ. ರೇಶನ್ ಸೇರಿದಂತೆ ಮನೆಗೆ ಬೇಕಾದ ಪ್ರತಿಯೊಂದು ಅಗತ್ಯವನ್ನು ಹೊತ್ತುಕೊಂಡೇ ಸಾಗಬೇಕಾದ ಈ ಗ್ರಾಮದ ಜನರಿಗೆ ಶಾಶ್ವತ ಸೇತುವೆಯನ್ನು ನಿರ್ಮಿಸಿಕೊಡುವ ಭರವಸೆಯನ್ನು ಜನಪ್ರತಿನಿಧಿಗಳು ಪ್ರತೀ ಚುನಾವಣೆ ಬರುವ ಸಂದರ್ಭದಲ್ಲಿ ನೀಡಿ ಹೋದವರು ಮತ್ತೆ ಈ ಗ್ರಾಮದತ್ತ ಸುಳಿಯೋದು ಇನ್ನೊಂದು ಚುನಾವಣೆ ಬಂದ ನಂತರವೇ ಎಂದು ಈ ಗ್ರಾಮದ ಜನ ವ್ಯವಸ್ಥೆಯ ವಿರುದ್ಧ ಕಿಡಿಕಾರುತ್ತಾರೆ.

ಅಧಿಕಾರಕ್ಕಾಗಿ ತಿಪ್ಪರೆಲಾಗ ಹಾಕುತ್ತಿರುವ ಜನಪ್ರತಿನಿಧಿಗಳಿಗೆ ಇಂಥಹ ಅದೆಷ್ಟೋ ಪ್ರದೇಶಗಳಲ್ಲಿರುವ ಜನರ ಸಮಸ್ಯೆಗಳತ್ತ ಒಂದು ಬಾರಿಯಾದರೂ ಗಮನಹರಿಸುವ ಪುರುಸೋತ್ತಿಲ್ಲದಂತಾಗಿದೆ. ಇನ್ನಾದರೂ ಈ ಗ್ರಾಮದ ಜನತೆಯ ಸಂಕಷ್ಟಗಳ ನಿವಾರಣೆಯತ್ತ ಶ್ರಮಿಸಬೇಕಿದೆ.

Related Posts

Leave a Reply

Your email address will not be published.