ವಿಟ್ಲದಲ್ಲಿ ಅಡುಗೆ ಅನಿಲ ದರ ಇಳಿಸುವಂತೆ ಡಿ.ವೈ.ಎಫ್.ಐನಿಂದ ಪ್ರತಿಭಟನೆ
ವಿಟ್ಲ : ಅಡುಗೆ ಅನಿಲ ದರ ಕೂಡಲೇ ಇಳಿಸುವಂತೆ ಒತ್ತಾಯಿಸಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ನಾಡ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿ.ಪಿ.ಐ.ಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಕೋವಿಡ್ ಮಹಾಮಾರಿಯಿಂದ ಜನತೆ ಈಗಾಗಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಈಗಾಗಲೇ ಗಗನಕ್ಕೇರಿದ್ದು, ಅಲ್ಲದೇ ದಿನ ಬಳಕೆಯ ಎಲ್ಲಾ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಅದರ ಮದ್ಯೆ ಕೇಂದ್ರ ಸರಕಾರವು ಅಡುಗೆ ಅನಿಲದ ಬೆಲೆಯನ್ನು ಏರಿಸಿರುವುದರಿಂದ ಜನತೆ ಮತ್ತಷ್ಟು ಕಷ್ಟದ ಪರಿಸ್ಥಿತಿಗೆ ತಲ್ಲಲ್ಪಟ್ಟಿದ್ದಾರೆ.ಇತ್ತೀಚೆಗೆ ವಾಣಿಜ್ಯ ಅನಿಲಕ್ಕೆ 80 ರೂ ಹಾಗೂ ಅಡುಗೆ ಅನಿಲಕ್ಕೆ 25 ರೂ ಏರಿಕೆ ಯಾಗಿರುತ್ತದೆ. ಜನ ಈಗಾಗಲೇ ಕೆಲಸವಿಲ್ಲದೆ ತತ್ತರಿಸುತ್ತಿದ್ದಾರೆ ಬೆಲೆ ಏರಿಕೆಯ ಕಾರಣದಿಂದ ಜನರಿಗೆ ಜೀವನ ನಡೆಸಲು ಸಾದ್ಯವಾಗದ ಪರಿಸ್ಥಿತಿ ಇದ್ದು ಇಂತಹ ಸಮಯದಲ್ಲಿ ಅಡುಗೆ ಅನಿಲದ ಬೆಲೆಯನ್ನು ಏರಿಸಿರುವುದು ಜನ ವಿರೋಧಿ ತೀರ್ಮಾನ ವಾಗಿದ್ದು, ಕೂಡಲೇ ಕೇಂದ್ರ ಸರಕಾರವು ಅಡುಗೆ ಅನಿಲದ ದರ ವನ್ನು ಕಡಿಮೆ ಮಾಡಿ ದೇಶದ ಜನತೆಯನ್ನು ಸಂಕಷ್ಡದಿಂದ ಪಾರು ಮಾಡಬೇಕಾಗಿದೆ ಎಂದು ಹೇಳಿದರು.
ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಮುಖಂಡರಾದ ಮಹಮ್ಮದ್ ಇಕ್ಬಾಲ್ ಹಳೆಮನೆ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ವಿಟ್ಲ ವಲಯ ಸಮಿತಿ ಮುಖಂಡರಾದ ಮಹಮ್ಮದ್ ಇರ್ಪಾನ್, ಇಬ್ರಾಹಿಂ ಭಾಷಿಂ, ಸುಲೈಮಾನ್ ಪೆಲತ್ತಡ್ಕ, ಶೆರೀಫ್ ಪಾತ್ರತೋಟ, ಕಾರ್ಮಿಕ ಮುಖಂಡರಾದ ಲಿಯಕತ್ ಖಾನ್, ದೇಜಪ್ಪ ಪೂಜಾರಿ ಮುಂತಾದವರು ಭಾಗವಹಿಸಿದ್ದರು.