ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪ್ರಾರಂಭ : ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿಕೆ
ಜಿಲ್ಲೆಯ ಹಲವು ದಶಕಗಳ ವಿಮಾನ ನಿಲ್ದಾಣ ಪ್ರಾರಂಭದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಶೀಘ್ರವೇ ಕಾಮಗಾರಿ ಚಾಲನೆ ಯಾಗಲಿದೆ. ನಾಳೆಯಿಂದಲೇ ಮಾರ್ಕಿಂಗ್ ಕಾರ್ಯ ಪ್ರಾರಂಬಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ವಿಮಾನ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಕಾಲಮಿತಿಯೊಳಗೆ ಗುಣಮಟ್ಟ ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರದ ಹೊರವಲಯದ ಬೂವನಹಳ್ಳಿ ಬಳಿ ಸ್ಥಾಪಿಸಲು ಉದ್ದೇಶಿತವಾದ ವಿಮಾನ ನಿಲ್ದಾಣದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದ್ದು, ಯಾವುದೇ ರೀತಿಯ ವಿಳಂಬವಾಗದಂತೆ ಕೆಲಸಪ್ರಾರಂಬಿಸುವಂತೆ ನಿರ್ದೇಶನ ನೀಡಿದರು. ವಿಮಾನ ನಿಲ್ದಾಣ ಕಾಮಗಾರಿಗೆ ಅನುಕೂಲವಾಗುವಂತೆ ತ್ವರಿತವಾಗಿ ವಿದ್ಯುತ್ ಟವರ್ಗಳ ಸ್ಥಳಾಂತರ ಕಾರ್ಯ ಪೂರ್ಣಗೊಳಿಸಿ ಈ ಸಂಧರ್ಭದಲ್ಲಿ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಅವರು ಕೆ.ಪಿ.ಟಿಸಿ.ಎಲ್., ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾ ರಾಂ.ಭೂದಾಖಲೆಗಳ ಉಪ ನಿರ್ದೇಶಕರಾದ ಹೆಮಲತಾ ,ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ಚೆಸ್ಕಾಮ ಅಧಿಕ್ಷಕ ಇಂಜಿನೀಯರ್ ಅಣ್ಣೇಗೌಡ, ಕಾರ್ಯವಾಹಕ ಅಭಿಯಂತರರಾದ ಅರ್ಜುನ್, ಕೆ.ಪಿ.ಟಿ.ಸಿ.ಎಲ್ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ನಾಗಾರ್ಜುನ್, ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೆಶ್, ತಹಶೀಲ್ದಾರ್ ನಟೇಶ್, ಕೆ.ಪಿ.ಟಿ.ಸಿ.ಎಲ್ ಸಹಾಯಕ ಅಭಿಯಂತರರಾದ ಕರುಣಾಕರ್ ಹಾಗೂ ಮತ್ತಿತರರು ಹಾಜರಿದ್ದರು.