ಸಂರಕ್ಷಕರ ವಿರುದ್ಧ ಹಿಂಸೆ ವಿಷಯದ ಮೇಲೆ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಮಣಿಪಾಲ :  ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್, ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗ, ಮಾಹೆ ಮಣಿಪಾಲದ ಸಹಯೋಗದೊಂದಿಗೆ,  ಮಣಿಪಾಲದ ಡಾ ಟಿಎಂಎ ಪೈ ಹಾಲ್ ನಲ್ಲಿ “ಸಂರಕ್ಷಕರ ವಿರುದ್ಧ ಹಿಂಸೆ ” ಕುರಿತು ಮುಂದುವರಿದ ವೈದ್ಯಕೀಯ ಶಿಕ್ಷಣವನ್ನು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂರಕ್ಷಕರ ವಿರುದ್ಧ ಹಿಂಸೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹಿಂಸಾಚಾರದ ಘಟನೆಗೆ ಒಂದು ತಂಡವಾಗಿ ಪ್ರತಿಕ್ರಿಯಾತ್ಮಕ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವನ್ನು ಎತ್ತಿ ತೋರಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಮಂಗಳೂರಿನ ಪೊಲೀಸ್ ಆಯುಕ್ತರಾದ ಶ್ರೀ ಎನ್ ಶಶಿಕುಮಾರ್, ಐಪಿಎಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದರು. ಡಾ.ಎಚ್ ಎಸ್ ಬಲ್ಲಾಳ್- ಸಹ ಕುಲಾಧಿಪತಿಗಳು, ಮಾಹೆ ಮಣಿಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಶರತ್ ಕುಮಾರ್, ಡೀನ್, ಕೆಎಂಸಿ, ಡಾ.ಅವಿನಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ, ಡಾ.ವಿನೋದ್ ಸಿ ನಾಯಕ್, ಸಂಯೋಜಕರು, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ ಮತ್ತು ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ತರಾದ ಡಾ.ವಿಕ್ರಮ್ ಪಲಿಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಎನ್ ಶಶಿಕುಮಾರ್ ಐಪಿಎಸ್ ಅವರು , “ಸಂರಕ್ಷಕರ ಮೇಲಿನ ಹಿಂಸೆಯು ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿಲ್ಲ, ಇದು ಪೋಲಿಸ್, ಕಂದಾಯ ಇಲಾಖೆ, ಸ್ಥಳೀಯ ಆಡಳಿತ , ಮಾಧ್ಯಮ, ಇತ್ಯಾದಿ ಇತರ ಇಲಾಖೆಗಳ ಕೆಲಸಗಾರರ ಮೇಲೆ ಸಹ ನಡೆಯುತ್ತಿದೆ. ಮೆಡಿಕೇರ್ ಸೇವಾ ಸಿಬ್ಬಂದಿಯ ಮೇಲಿನ ಹಿಂಸೆ ಮತ್ತು ಮೆಡಿಕೇರ್ ಸೇವಾ ಸಂಸ್ಥೆಗಳಲ್ಲಿ ಆಸ್ತಿ ಹಾನಿಗೆ ಸಂಬಂದಿಸಿದ ಕಾನೂನನ್ನು ಕರ್ನಾಟಕದಲ್ಲಿ 2009 ರಲ್ಲಿ ಪರಿಚಯಿಸಲಾಯಿತು. ಎಲ್ಲ ವೈದ್ಯರಿಗೆ ನನ್ನ ಸಲಹೆಯೆಂದರೆ ತಾವೆಲ್ಲರೂ ಸ್ಥಳೀಯ ಪೊಲೀಸ್ ಠಾಣೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಇಂತಹ ಅಹಿತಕರ ಘಟನೆ ಸಂಭವಿಸಿದಲ್ಲಿ ತಕ್ಷಣ ಸ್ಥಳೀಯ ಪೊಲೀಸರಿಗೆ ವರದಿ ಮಾಡಿ ” ಎಂದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಡಾ. ಬಲ್ಲಾಳ್ ರವರು, “ಈ ಉತ್ತಮ ಮತ್ತು ಅವಶ್ಯ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಭಿನಂದನೆಗಳು. ನಾವೆಲ್ಲರೂ ಸೇರಿ ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಸಣ್ಣ ನರ್ಸಿಂಗ್ ಹೋಂಗಳು ಮತ್ತು ಕ್ಲಿನಿಕ್ಗಳಲ್ಲಿ ಇಂತಹ ಪ್ರಕರಣ ಸಂಭವಿಸಿದಲ್ಲಿ ಕಡಿಮೆ ಮಾನವ ಸಂಪನ್ಮೂಲದ ಕಾರಣ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ. ರೋಗಿಗೆ ರೋಗನಿರ್ಣಯ, ಚಿಕಿತ್ಸೆಯ ವಿಧಾನ ಮತ್ತು ಚಿಕಿತ್ಸೆಯ ವೆಚ್ಚದ ಬಗ್ಗೆ ಆರಂಭದಲ್ಲಿ ವಿವರಿಸಿ ಹೇಳಿದರೆ ,ಇಂತಹ ಅಹಿತಕರ ಘಟನೆಗಳನ್ನು ಕಡಿಮೆ ಮಾಡಬಹುದು” ಎಂದರು . ಡಾ ಶರತ್ ಕುಮಾರ್ ಸ್ವಾಗತಿಸಿದರು, ಡಾ ಅವಿನಾಶ್ ಶೆಟ್ಟಿ ಅವರು ಸಂರಕ್ಷಕರ ವಿರುದ್ಧ ಹಿಂಸೆ ಸಿಎಂಇ ಕುರಿತು ಅವಲೋಕನ ನೀಡಿದರು.

ಉದ್ಘಾಟನೆಯ ನಂತರ, ನುರಿತ ತಜ್ಞರೊಂದಿಗೆ ವಿಷಯದ ಕುರಿತು ಚರ್ಚಾ (ಪ್ಯಾನೆಲ್ ಡಿಸ್ಕಷನ್) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಪೊಲೀಸ್ ಆಯುಕ್ತರಾದ ಶ್ರೀ ಎನ್ ಶಶಿಕುಮಾರ್ , ಐಪಿಎಸ್, ಗ್ರಾಹಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಡಾ. ರವೀಂದ್ರನಾಥ ಶಾನಭಾಗ್, ಟೈಮ್ಸ್ ಆಫ್ ಇಂಡಿಯಾದ ಮಾಜಿ ಸಹಾಯಕ ಸಂಪಾದಕರಾದ ಶ್ರೀ ಜೈದೀಪ್ ಶೆಣೈ, , ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ, ಪ್ರಶಾಮಕ ಔಷಧಿ ಮತ್ತು ಆರೈಕೆ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ನವೀನ್ ಎಸ್ ಸಲೀನ್ಸ್, ಐ ಎಂ ಎ ಉಡುಪಿಯ ಸಂಯೋಜಕರಾದ ಡಾ.ವೈ ಸುದರ್ಶನ್ ರಾವ್, ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಡಾ.ವಿನೋದ್ ಸಿ ನಾಯಕ್ ಪ್ಯಾನೆಲ್ ಡಿಸ್ಕಶನ್ ಕಾರ್ಯಕ್ರಮವನ್ನು ನಿರ್ವಹಿಸಿದರು .

Related Posts

Leave a Reply

Your email address will not be published.