ಮೈದಾನದ ಪ್ರವೇಶ ದಾರಿ ಬಂದ್ ಗ್ರಾಪಂನಿಂದ ಸಾಮರಸ್ಯ ಒಡೆಯುವ ಕೆಲಸ : ಎ.ಜತೀಂದ್ರ ಶೆಟ್ಟಿ ಆರೋಪ

ಪುತ್ತೂರು: 34 ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯ ಮೈಂದನಡ್ಕದಲ್ಲಿ ಸಾರ್ವಜನಿಕ ಆಟದ ಮೈದಾನದ ಪ್ರವೇಶ ದಾರಿಯನ್ನು ಮುಚ್ಚಿ ಧರ್ಮಾಧಾರಿತ ರಾಜಕಾರಣದ ಮೂಲಕ ಸಮಾಜದ ಸಾಮರಸ್ಯವನ್ನು ಒಡೆಯುವ ಹುನ್ನಾರ ಗ್ರಾಪಂ ನಡೆಸಿದ್ದು, ಇದೊಂದು ಸಂಘರ್ಷದ ವಾತಾವರಣ ಉಂಟುಮಾಡುವ ಕಾರ್ಯವಾಗಿದೆ ಎಂದು ಮೈಂದನಡ್ಕ ಶಾಂತಿ-ಸೌಹಾರ್ದತೆ ಉಳಿಸಿ ಹೋರಾಟ ಸಮಿತಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎ.ಜತೀಂದ್ರ ಶೆಟ್ಟಿ ಅಲಿಮಾರ್ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಸತತವಾಗಿ ಹೋರಾಟ ಮಾಡಿ ಸುಮಾರು 55 ಸೆಂಟ್ಸ್ ಈ ಜಾಗವನ್ನು ಸಾರ್ವಜನಿಕ ಮೈದಾನಕ್ಕೆ ಕೊಡಿಸಿದವನು ನಾನು. ಆದರೆ ಇದೀಗ ಈ ಜಾಗ ಕಂದಾಯ ಇಲಾಖೆಯ ವಶದಲ್ಲಿದ್ದು, ಸ್ಥಳೀಯ ಗ್ರಾಪಂ ಈ ಮೈದಾನ ಪ್ರವೇಶಿಸುವ ಜಾಗದಲ್ಲಿ ಅಗರು ನಿರ್ಮಿಸಿ ಮೈದಾನ ಪ್ರವೇಶಿಸದಂತೆ ಮಾಡಿದ್ದು, ಒಂದು ಧರ್ಮಕ್ಕೆ ಮೀಸಲಿಡುವ ಹುನ್ನಾರ ನಡೆಸಿದಂತಿದೆ. ಈ ಮೈದಾನದಲ್ಲಿ ಮಕ್ಕಳು ಸೈಕಲ್ ಸವಾರಿ ಮಾಡುವುದು, ಆಟವಾಡುವುದು, ವಾಕಿಂಗ್ ಮಾಡುತ್ತಿದ್ದರು.

ಪಕ್ಕದಲ್ಲೇ ಕ್ರೈಸ್ತ ಧರ್ಮದವರ ದಫನ ಭೂಮಿ ಹಾಗೂ ಪ್ರಾರ್ಥನಾ ಮಂದಿರವಿದೆ. ವಾರ್ಷಿಕ ಹಾಗೂ ತಿಂಗಳ ಮರಣ ಪೂಜೆಗೆ ಬರುವವರಿಗೆ ವಾಹನ ಪಾರ್ಕಿಂಗ್‍ಗೆ ಅನುಕೂಲವಾಗುತ್ತಿತ್ತು. ಆದ್ದರಿಂದ ತಕ್ಷಣ ಮೈದಾನ ಪ್ರವೇಶದ ದ್ವಾರದಲ್ಲಿ ಮಣ್ಣು ಅಗೆದಲ್ಲಿ ಮೋರಿ ಅಳವಡಿಸಿ ಮಕ್ಕಳಿಗೆ ಆಟವಾಡಲು ಅವಕಾಶ ನೀಡಬೇಕು. ಅಲ್ಲದೆ ಈ ಹಿಂದಿನಂತೆ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ರಾಜ್ಯ ರೈತ ಸಂಘ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.