19.20.21 ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳೂರು ಬಿಷಪ್
ನೈಜ ಘಟನೆ ಆಧಾರಿತ ‘19.20.21’ ಕನ್ನಡ ಸಿನಿಮಾವನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅ.ವಂ.ಡಾ. ಪೀಟರ್ ಪೌಲ್ ಸಲ್ಡಾನಾ ಅವರು ಬುಧವಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳ್ತಂಗಡಿಯ ಕುತ್ಲೂರಿನ ಮಲೆಕುಡಿಯರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಮತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿ ವಿಠಲ ಮಲೆಕುಡಿಯ ಹಾಗೂ ಅವರ ತಂದೆಯನ್ನು ನಕ್ಸಲ್ ಎಂಬ ಸುಳ್ಳು ಕೇಸು ದಾಖಲಿಸಿ ಬಂಧಿಸಿದ ಘಟನೆ , ಆ ಬಳಿಕ ವಿಠಲ ಮಲೆಕುಡಿಯನ ಪರವಾಗಿ ನಡೆದ ಜನ ಚಳವಳಿ , ಕಾನೂನು ಹೋರಾಟದ ವಿಜಯವನ್ನು ಹಿನ್ನೆಲೆಯಾಗಿರಿಸಿಕೊಂಡು ಯುವ ನಿರ್ದೇಶನ ಮಂಸೋರೆ ಅವರು 19.20.21 ಹೆಸರಿನ ಸಿನಿಮಾ ನಿರ್ಮಿಸಿದ್ದರು.
ಸಿನಿಮಾದ ರಿಯಲ್ ಹಿರೋಗಳಲ್ಲಿ ಪ್ರಮುಖರಾದ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ, ಹೋರಾಟಗಾರ ಮುನೀರ್ ಕಾಟಿಪಳ್ಳ ಅವರ ಜೊತೆಗೆ ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನಾ ಅವರು ಮಂಗಳೂರಿನ ಪ್ರಭಾತ್ ಥಿಯೋಟರ್ ನಲ್ಲಿ ಸಿನಿಮಾ ವೀಕ್ಷಣೆ ಮಾಡಿದರು.
ಸಂವಿಧಾನದ ದತ್ತವಾದ ಅಭಿವ್ಯಕ್ತಿ ಹಕ್ಕು ಹಾಗೂ ಬದುಕುವ ಹಕ್ಕಿನ ಬಗ್ಗೆ ಪ್ರತಿಪಾದನೆ ಮಾಡುವ ಸಂವಿಧಾನದ ವಿಧಿಗಳಾದ 19, 20 ಹಾಗೂ ಆರ್ಟಿಕಲ್ 21 ರ ಮಹತ್ವದ ನೆಲೆಯಲ್ಲಿ ಸಿನಿಮಾದ ಕಥೆ ಹೆಣೆಯಲಾಗಿದೆ. ಸಿನಿಮಾ ವೀಕ್ಷಣೆಯ ಬಳಿಕ ಪ್ರತಿಕ್ರಿಯೆ ನೀಡಿದ ಬಿಷಪ್ ಅವರು , ಈ ಸಿನಿಮಾ ಸಂವಿಧಾನದ ಪಾಠದಂತೆ ನಿರೂಪಿತವಾಗಿದೆ. ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಎಲ್ಲಾ ವಿದ್ಯಾರ್ಥಿಗಳು 19.20.21 ಸಿನಿಮಾ ನೋಡಬೇಕು ಎಂದು ಅಭಿಪ್ರಾಯಪಟ್ಟರು.
ಸಿನಿಮಾದ ರಿಯಲ್ ಹಿರೋಗಳಾದ ದಿನೇಶ್ ಹೆಗ್ಡೆ ಉಳೆಪಾಡಿ, ಮುನೀರ್ ಕಾಟಿಪಳ್ಳ ಅವರ ಜೊತೆಗೆ ಸಿನಿಮಾ ವೀಕ್ಷಣೆಯ ಅವಕಾಶ ಲಭಿಸಿದ್ದು ಮತ್ತೊಂದು ಖುಷಿಯ ಅನುಭವ. ಇಡೀ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ, ಒಳ್ಳೆಯ ಚಿತ್ರೀಕರಣ ,ಒಳ್ಳೆಯ ಅಭಿನಯ , ಒಳ್ಳೆಯ ನಿರೂಪಣೆ ಎಂದು ಬಿಷಪ್ ಸಲ್ದಾನ ಅವರು ಅನಿಸಿಕೆ ವ್ಯಕ್ತಪಡಿಸಿದರು.