ಮಂಗಳೂರು -ಕುಡಿಯುವ ಬಾವಿ ನೀರಿಗೆ ಸೇರಿದ ಡ್ರೈನೇಜ್ ನೀರು : ದೂರು ನೀಡಿದ್ರೂ ಸ್ಪಂದಿಸದ ಅಧಿಕಾರಿಗಳು
ಕುಡಿಯುವ ಬಾವಿಗೆ ಸೇರಿದೆ ಡ್ರೈನೇಜ್ ನೀರು, ಕಲುಷಿತ ನೀರು ಕುಡಿದು ಆರೋಗ್ಯ ಸಮಸ್ಯೆ, ದೂರು ನೀಡಿದ್ರೂ ನಮ್ಮ ಸಮಸ್ಯೆಯನ್ನು ಯಾರು ಸ್ಪಂದಿಸುತ್ತಿಲ್ಲ ಎಂದು ರೋಹಿತ್ ನಗರದ ನಿವಾಸಿಗಳು ಅಳಲನ್ನು ತೋಡಿಕೊಂಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರೋಹಿತ್ ನಗರದ ಸೆಕೆಂಡ್ ಮೈನ್ ಕ್ರಾಸ್‍ನಲ್ಲಿ ವಾಸವಿರುವ ನಿವಾಸಿಗಳಿಗೆ ಬಾವಿ ನೀರಿನಲ್ಲಿ ಡ್ರೈನೇಜ್ ನೀರು ಶೇಖರಣೆಗೊಂಡು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಕಲುಷಿತ ನೀರು ಕುಡಿದು ಅಲ್ಲಿನ ನಿವಾಸಿಗಳ ಆರೋಗ್ಯವು ಹದಗೆಟ್ಟಿದೆ. ಈ ಹಿಂದೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ದೂರನ್ನು ನೀಡಲಾಗಿದೆ ಆದರೆ, ಈವರೆಗೆ ಅವರ ಸಮಸ್ಯೆಯನ್ನು ಪರಿಹರಿಸದಿರುವುದರಿಂದ ಅಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆ ಉಂಟಾಗಿದೆ.
ಈ ಬಗ್ಗೆ ಐವನ್ ಅವರು ಮಾತನಾಡಿ, ಬಾವಿ ನೀರಿಗೆ ಡ್ರೈನೇಜ್ ನೀರು ಸೇರಿರುವುದರಿಂದ ನಮಗೆ ಕುಡಿಯಲು ನೀರಿಲ್ಲದಂತಾಗಿದೆ. ಮನಪಾ ಜನಪ್ರತಿನಿಧಿಗಳಿಗೆ, ಪಾಲಿಕೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಬಾವಿ ಸ್ವಚ್ಚಗೊಳಿಸುವ ಭರವಸೆ ನೀಡಿದ್ದರೆ ಹೊರತು ಇನ್ನೂ ಸ್ಪಂದಿಸಿಲ್ಲ. ಕಲುಷಿತ ನೀರು ಕುಡಿದು ನಮ್ಮ ಆರೋಗ್ಯವು ಹದಗೆಟ್ಟಿದೆ. ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಸ್ಪಂದಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ನೀರಿನ ಅಭಾವವಿರುವ ಈ ಸಮಯದಲ್ಲಿ ರೋಹಿತ್ ನಗರದ ಪರಿಸರದ ಬಾವಿ ನೀರಿಗೆ ಡ್ರೈನೇಜ್ ನೀರು ಸೇರ್ಪಡೆಗೊಂಡು ದುರ್ನಾತ ಬೀರುತ್ತಿದ್ದು, ಬಾವಿ ನೀರನ್ನು ಬಳಕೆ ಮಾಡದಂತಿದೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲ್ಲಿ ಪರಿಸರ ವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿಬೇಕಿದೆ.