ಬುಲ್ಲರ್ ಇಂಡಿಯಾ ಜೊತೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಒಪ್ಪಂದ
ಮೂಡುಬಿದಿರೆ: ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (ಎಐಇಟಿ) ಕೃಷಿ ಎಂಜಿನಿಯರಿಂಗ್ ವಿಭಾಗವು ಬೆಂಗಳೂರಿನ ಬುಲ್ಲರ್ ಇಂಡಿಯಾ ಕಂಪನಿ ಜೊತೆ ಒಡಂಬಡಿಕೆಗೆ ಸಹಿ ಹಾಕಿತು.
ಬುಲ್ಲರ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಗೋಖಲೆ ಹಾಗೂ ಕಂಪೆನಿಯ ವೆಂಕಟೇಶ್ ಮತ್ತು ರವೀಂದ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕೃಷಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶಶಿಕುಮಾರ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಸಮ್ಮುಖದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಈ ಒಡಂಬಡಿಕೆ ಪ್ರಕಾರ ಬುಲ್ಲರ್ ಇಂಡಿಯಾ ಕಂಪೆನಿಯ ರೈಸ್ ಮಿಲ್ಲಿಂಗ್ (ಅಕ್ಕಿ ಗಿರಣಿ) ತಂತ್ರಜ್ಞಾನ ತರಬೇತಿ ಮತ್ತು ಪ್ರಮಾಣೀಕರಣದ ಕೋರ್ಸ್ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಒಪ್ಪಿಗೆ ಸೂಚಿಸಲಾಯಿತು.
ಅಕ್ಕಿ ಗಿರಣಿ ತಂತ್ರಜ್ಞಾನ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬುಲ್ಲರ್ ಇಂಡಿಯಾ ಕಂಪೆನಿಯು ತಾಂತ್ರಿಕ ಉಪನ್ಯಾಸ, ಕಾರ್ಯಾಗಾರ ಹಮ್ಮಿಕೊಳ್ಳುವುದು.
ಆಹಾರ ಸಂಸ್ಕರಣಾ ತಂತ್ರಜ್ಞಾನದ ಕುರಿತು ಎಐಇಟಿ ವಿದ್ಯಾರ್ಥಿಗಳು ಹಾಗೂ ಮೇಳಗಳ ಸಂದರ್ಭದಲ್ಲಿ ಸಂವಾದ ನಡೆಸಲು ಬುಲ್ಲರ್ ಇಂಡಿಯಾ ಕಂಪೆನಿಗೆ ಅವಕಾಶ ಕಲ್ಪಿಸುವುದು. ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ಬೋಧಕರಿಗೆ ಉನ್ನತ ಸಂಶೋಧನೆಗೆ ಪ್ರೋತ್ಸಾಹಿಸುವುದು ಹಾಗೂ ಅಗತ್ಯ ಸೇವೆ ನೀಡಲು ಒಪ್ಪಿಗೆ ನೀಡಲಾಯಿತು.
ಈ ಒಪ್ಪಂದದ ಪ್ರಕಾರ ಬುಲ್ಲರ್ ಇಂಡಿಯಾ ಕಂಪನಿಯು ಎಐಇಟಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಉಪನ್ಯಾಸ, ಕಾರ್ಯಾಗಾರ ನಡೆಸಲು ಸಂಪನ್ಮೂಲ ವ್ಯಕ್ತಿಯನ್ನು ನಿಯೋಜಿಸುವುದು. ವಿದ್ಯಾರ್ಥಿಗಳ ಅಕಾಡೆಮಿಕ್ ಪ್ರಾಜೆಕ್ಟ್ಗಳಿಗೆ ಸಹಕಾರ ನೀಡುವುದು. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ಕೈಗಾರಿಕಾ ಭೇಟಿ ಹಾಗೂ ತರಬೇತಿಗೆ ಅವಕಾಶ ಕಲ್ಪಿಸುವುದು. ಅಕ್ಕಿ ಗಿರಣಿ ತಂತ್ರಜ್ಞಾನ ಕುರಿತು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸುವ ಒಪ್ಪಂದಕ್ಕೆ ಬರಲಾಯಿತು.