ಬೈಂದೂರಿಗೆ ಸಿಎಂ ಬೊಮ್ಮಾಯಿ ಭೇಟಿ ಹಿನ್ನೆಲೆ : ಜಿಲ್ಲಾಧಿಕಾರಿ ಕೂರ್ಮರಾವ್ ಅವರಿಂದ ಸ್ಥಳ ಪರಿಶೀಲನೆ
ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ.7ರಂದು ಬೈಂದೂರಿಗೆ ಆಗಮಿಸಲಿದ್ದು, ಅದರ ಪೂರ್ವಭಾವಿ ತಯಾರಿ, ಇಂದಿನಿಂದಲೇ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು, ಸಭೆ ನಡೆಯುವ ಸ್ಥಳ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು, ಸಿಎಂ ಭೇಟಿ ನೀಡುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಲ್ಲಾ ಅಧಿಕಾರಿಗಳನ್ನು ಕರೆಸಿ ಸಮಾಲೋಚನೆ ನಡೆಸಿದರು.
ಸಾವಿರ ಕೋಟಿ ರೂಪಾಯಿಗೂ ಮಿಕ್ಕಿದ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಾಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರ ಮುಳ್ಳಿಕಟ್ಟೆಯಲ್ಲಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು,ಈ ವೇಳೆ ಮುಖ್ಯಮಂತ್ರಿಗಳು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಹಲವು ಶಾಸಕರು ಸಚಿವರು ಸಹ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಗಣ್ಯರು ಆಗಮನದ ಹಿನ್ನೆಲೆಯಲ್ಲಿ ಎಲ್ಲಾ ತರದ ಮುಂಜಾಗ್ರತಾ ಕ್ರಮವನ್ನು ಮಾಡಿಕೊಳ್ಳುವ ಸಲುವಾಗಿ ಇಂದು ಜಿಲ್ಲಾಧಿಕಾರಿ ಕುರ್ಮಾ ರಾವ್ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆದು ಪೂರ್ವಭಾವಿ ತಯಾರಿಯ ಬಗ್ಗೆ ಸಮಾಲೋಚನೆ ನಡೆಸಿದರು.