ತೆಂಗಿನಕಾಯಿ ಸಂಗ್ರಹಿಸಲು ನದಿಗೆ ಹೋಗಿದ್ದ ವ್ಯಕ್ತಿ ಸಾವು
ಬಜಪೆ : ನಂದಿನಿ ನದಿಯಲ್ಲಿ ತೆಂಗಿನಕಾಯಿ ಸಂಗ್ರಹಿಸಲು ಹೋಗಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕಟೀಲು ಸಮೀಪದ ಕಲ್ಲಕುಮೇರು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ನಂದಾವರ ಕೊಪ್ಪಳ ನಿವಾಸಿ ಅಶೋಕ (54) ಎಂಬವರು ಕೆಲಸದ ನಿಮಿತ್ತ ಕಟೀಲು ಬಳಿಯ ಸಂಬಂಧಿಕರ ಮನೆಯಲ್ಲಿ ವಾಸವಿದ್ದವರು ಶುಕ್ರವಾರ ಸಂಜೆ ನಂದಿನಿ ನದಿಯಲ್ಲಿ ಬರುವ ತೆಂಗಿನಕಾಯಿಗಳನ್ನು ಸಂಗ್ರಹಿಸಲು ತೆರಳಿದ್ದ ವೇಳೆ ಆಯ ತಪ್ಪಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬಜಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಹುಡುಕಾಟ ನಡೆಸಿದರೂ ಶನಿವಾರ ಬೆಳಗ್ಗಿನವರೆಗೂ ಶವ ಪತ್ತೆಯಾಗಿರಲಿಲ್ಲ. ಬಂಟ್ವಾಳದ ತಂಡವೊಂದು ಆಗಮಿಸಿ ಶನಿವಾರ ಬೆಳಿಗ್ಗೆ ಶೋಧಕಾರ್ಯ ನಡೆಸಿ ಅಶೋಕ ಅವರ ಶವವನ್ನು ಪತ್ತೆಹಚ್ಚಿದ್ದು ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬಂಟ್ವಾಳ ನಂದಾವರ ಕೊಪ್ಪಳದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ನದಿ ದಡದತ್ತ ತೆರಳುವುದಕ್ಕು ಮುನ್ನ ಅಶೋಕ ಅವರು ಸಂಬಂಧಿಕರ ಮನೆ ಮಂದಿಯೊಂದಿಗೆ ಸೇರಿ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ಶುಕ್ರವಾರ ಮಧ್ಯಾಹ್ನ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ಬಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದು ವಿವಾಹಿತರಾಗಿದ್ದ ಅವರ ಪತ್ನಿ ಅನಾರೋಗ್ಯದಿಂದಾಗಿ ಮೂರು ವರ್ಷದ ಹಿಂದೆಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ