ಭಾರತದಲ್ಲಿ ಕೋವಿಶೀಲ್ಡನ್ನೇ ಮುಖ್ಯವಾಗಿಸಿದ್ದೇಕೆ?

ಕೋವಿಡ್ ಕಾಲದಲ್ಲಿ ಬಾಬಾ ರಾಮದೇವ್ ಕಂಪೆನಿಗೆ ಮತ್ತು ಕೋವಿಶೀಲ್ಡ್ ಲಸಿಕೆ ಕಂಪೆನಿಗೆ ಅನುಕೂಲವಾಗುವಂತೆ ಮೋದಿಯವರ ಸರಕಾರ ನಡೆದುಕೊಂಡಿತು ಎಂಬ ವಿಷಯ ಸುಪ್ರೀಂ ಕೋರ್ಟಿನಲ್ಲೇ ಪ್ರಕಟಗೊಂಡಿದೆ. ಈ ಬಗೆಗೆ ಸರ್ವೋಚ್ಚ ನ್ಯಾಯಾಲಯವು ಜನರ ಒಳಿತಿಗಿಂತ ಲಸಿಕೆ ಕಂಪೆನಿಗಳ ಲಾಭ ಮುಖ್ಯವಾಯಿತೇ ಎಂದು ಬಿಜೆಪಿ ಒಕ್ಕೂಟ ಸರಕಾರವನ್ನು ಹಿಂದೆಯೇ ಪ್ರಶ್ನಿಸಿದ್ದೂ ಆಗಿದೆ. ಸುಪ್ರೀಂ ಕೋರ್ಟ್ ಖಂಡನೆಯ ಬಳಿಕ ಉತ್ತರಾಖಂಡ ಸರಕಾರವು ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಸಹೋದರರ ಕಂಪೆನಿಯ 14 ತಯಾರಿಕೆಗಳಿಗೆ ನೀಡಿದ್ದ ಪರವಾನಗಿಯನ್ನು ರದ್ದು ಪಡಿಸಿರುವುದೂ ಆಗಿದೆ.


ಬಾಬಾ ರಾಮ್‍ದೇವ್‍ರ ಕಂಪೆನಿಯು ಬಿಜೆಪಿ ಪಕ್ಷಕ್ಕೆ 500 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾಗಿಯೂ ವರದಿಯಾಗಿದೆ. ಕೋವಿಶೀಲ್ಡ್ ತಯಾರಕಾ ಕಂಪೆನಿ ಅಸ್ತ್ರಾಜೆನಿಕಾ ಸಹ ದೊಡ್ಡ ಮೊತ್ತದ ದೇಣಿಗೆಯನ್ನು ಬಿಜೆಪಿಗೆ ಕೊಟ್ಟಿರುವುದು ತಿಳಿದು ಬಂದಿದೆ. ಔಷಧಿಗಳು ಜೀವ ರಕ್ಷಕವಾಗಿರಬೇಕು. ಆದರೆ ಭಾರತದಲ್ಲಿ ಇತ್ತೀಚಿನ ವರುಷಗಳಲ್ಲಿ ಹುಟ್ಟಿಕೊಂಡಿರುವ ಔಷಧಿ ಮತ್ತು ಪೌಷ್ಟಿಕ ಆಹಾರ ಎಂಬಿತ್ಯಾದಿ ಕಂಪೆನಿಗಳು ಜನ ಸೇವೆಗಿಂತ ಕಾಸಿನ ಕುಯಿಲೆಗೆ ಮಹತ್ವ ಕೊಡುವವುಗಳೇ ಹೆಚ್ಚು. ಲಸಿಕೆಗೆ ಒತ್ತಾಯ ಏಕೆ, ಜನರಿಗೆ ಅವರ ಜೀವದ ಬೆಲೆ ಗೊತ್ತಿಲ್ಲವೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ಬಳಿಕವೇ ಕೇಂದ್ರದ ಬಿಜೆಪಿ ಸರಕಾರವು ಒತ್ತಾಯದ ಲಸಿಕೆಗೆ ಕೊನೆ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.


ಕರಾವಳಿಯಲ್ಲಿ ಧಾರಾಳವಾಗಿ ಬೆಳೆಯುವ ನೋನಿ ಬಿದ್ದು ಹೋಗುತ್ತಿದ್ದ ಫಲ. ಕಳೆದೊಂದು ದಶಕದಿಂದ ಅದರ ಸಾರ ತೆಗೆದು, ಇದನ್ನು ಕುಡಿದರೆ ಜನರು ಸಾಯುವುದೇ ಇಲ್ಲ ಎನ್ನುವ ಮಟ್ಟಿಗೆ ಪ್ರಚಾರವನ್ನು ಕೆಲವು ಕಂಪೆನಿಗಳು ಮಾಡಿ ಒಂದೇ ದಶಕದಲ್ಲಿ ಹಣದ ಮೂಟೆ ಕಟ್ಟಿದ್ದಿದೆ. ಇದು ಉದಾಹರಣೆ ಮಾತ್ರ. ನಮ್ಮವರ ಮೂರ್ಖತನ ಎಷ್ಟಿದೆಯೆಂದರೆ ಕೋವಿಡ್‍ಗೆ ಮೊದಲು ಬಂದ ಹಕ್ಕಿ ಜ್ವರದ ಕಾಲದ ಕತೆಯಿದು. ಅದಕ್ಕೆ ಪಪ್ಪಾಯಿ ಎಲೆಯ ಕಷಾಯ ಮದ್ದು ಎಂದು ಯಾರೋ ಹೇಳಿದರು. ಅದು ನಿರೂಪಿತವಲ್ಲ, ಹಾಗೆಂದೊಡನೆ ಅದರಲ್ಲಿ ಔಷಧೀಯ ಅಂಶ ಇರಲೇ ಇಲ್ಲ ಎಂದೂ ಹೇಳಲಿಕ್ಕಾಗದು. ಅದರ ನಡುವೆ ದೊಡ್ಡ ಪತ್ರಿಕೆಯೊಂದರಲ್ಲಿ ಬಂದ ಲೇಖನದಲ್ಲಿ ಪಪ್ಪಾಯಿ ಎಲೆಯ ಉಸಿರಾಟ ಸರಿಪಡಿಸುವ ಗುಣದ ಬಗೆಗೆ ನಮ್ಮ ಪುರಾತನ ಆಯುರ್ವೇದ ಗ್ರಂಥಗಳಲ್ಲಿ ಇರುವುದಾಗಿ ಬರೆಯಲಾಗಿತ್ತು. ಮಧ್ಯ ಅಮೆರಿಕ ಮೂಲದ ಪಪ್ಪಾಯಿಯನ್ನು ಇಲ್ಲೆಲ್ಲ ಸರಿಯಾಗಿ ಬೆಳೆಯತೊಡಗಿದ್ದು ನೂರೈವತ್ತು ವರುಷದೀಚೆಗೆ ಎಂಬ ಜ್ಞಾನವೂ ಇವರಿಗೆ ಇರಲಿಲ್ಲ.


ಲಸಿಕೆ ತಯಾರಿಕೆಯ ಸರಳ ವಿಧಾನ ಯಾವುದು? ಹಾವಿನ ವಿಷವನ್ನು ಕುದುರೆಯಂತಾ ಪ್ರಾಣಿಗಳಿಗೆ ಕ್ರಮ ಕಾಲ ಗತಿಯಲ್ಲಿ ನೀಡುವುದು. ಆ ಪ್ರಾಣಿಗಳಲ್ಲಿ ಉತ್ಪನ್ನವಾಗುವ ಪ್ರತಿವಿಷ ಕಾರಕವನ್ನು ತೆಗೆದು, ಹಾವು ಕಚ್ಚಿದವರಿಗೆ ಆಂಟಿ ಬಯಾಟಿಕ್ ಆಗಿ ನೀಡುವುದು. ರೋಗ ಕಾರಕ ಬ್ಯಾಕ್ಟೀರಿಯಾಗಳಾದರೆ ಆ ಬ್ಯಾಕ್ಟೀರಿಯಾವನ್ನು ಗಿನಿಹಂದಿ, ಮಂಗ ಮೊದಲಾದವಕ್ಕೆ ಕ್ರಮವಾಗಿ ನೀಡಿ ಪ್ರತಿ ರೋಗ ತಡೆ ಇಲ್ಲವೇ ಲಸಿಕೆಗಳನ್ನು ಪಡೆಯಲಾಗುತ್ತದೆ. ಈ ಮಾದರಿಯಲ್ಲೇ ಸಿಡುಬು ರೋಗವನ್ನು ಜಗತ್ತಿನಿಂದಲೇ ನಿರ್ಮೂಲ ಮಾಡಲಾಗಿದೆ. ಅದೇ ವಿಧಾನವನ್ನು ಕೋವಿಡ್ ಲಸಿಕೆ ತಯಾರಿಕೆಗೂ ಬಳಸಲಾಗಿದೆ.


ಆದರೆ ಭಾರತದಲ್ಲಿ ತಯಾರಾದ ಲಸಿಕೆಗಳು ಸೂಕ್ತ ಗುಣಮಟ್ಟ ಹೊಂದಿರಲಿಲ್ಲ ಎಂದು ವಿಶ್ವ ಸಂಸ್ಥೆಯ ಹೂ- ಲೋಕ ಆರೋಗ್ಯ ಸಂಸ್ಥೆ ಹೇಳಿದರೂ ಭಾರತ ಸರಕಾರವು ಆ ಬಗೆಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಲಸಿಕೆ ತೆಗೆದುಕೊಳ್ಳುವಂತೆ ಪ್ರಚಾರ ನಡೆಸಿತ್ತು. ಬಡ ದೇಶಗಳಿಗೆ ಲಸಿಕೆ ರಫ್ತು ಮಾಡುವಂತೆಯೂ ನೋಡಿಕೊಂಡಿತ್ತು. ಈ ಲಸಿಕೆ ಪಡೆದ ಹಲವರು ಬೇರೆ ರೀತಿಯ ತೊಂದರೆಗೆ ಒಳಗಾದುದು ವರದಿಯಾಗಿತ್ತು. ಅವರ ಸಂಖ್ಯೆ ಕಡಿಮೆ ಇರಬಹುದು; ಸತ್ತವರ ಸಂಖ್ಯೆಯೂ ಕಡಿಮೆ ಇರಬಹುದು. ಆದರೆ ಒಂದು ಲಸಿಕೆ ಅನಾಹುತ ಮಾಡುತ್ತಿದೆ ಎಂದರೆ ಸರಕಾರದ ಆರೋಗ್ಯ ಇಲಾಖೆ ಅದನ್ನು ಕೂಡಲೆ ಗಮನಿಸಬೇಕು; ಕ್ರಮ ತೆಗೆದುಕೊಳ್ಳಬೇಕು. ಆದರೆ ಭಾರತದಲ್ಲಿ ದೇಣಿಗೆಯೇ ಮುಖ್ಯವಾಗಿದ್ದಂತೆ ಕಾಣುತ್ತದೆ.
ಅದಕ್ಕಿಂತ ಮುಖ್ಯವಾದುದು ಲಸಿಕೆಯನ್ನೇ ಪಡೆಯದವರು ಇನ್ನೂ ಹೆಚ್ಚು ಆರೋಗ್ಯದಿಂದ ಇರುವುದು ಕಂಡುಬಂದಿದೆ. ಈಗ ಕೋವಿಶೀಲ್ಡ್ ಲಸಿಕೆಗಳ ದುಷ್ಪರಿಣಾಮಗಳ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲು ಕೋರಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಪ್ಲೇಟಿಲೆಟ್‍ಗಳು ಕಡಿಮೆಯಾಗಿ ರಕ್ತ ಹೆಪ್ಪುಗಟ್ಟದ ತ್ರೋಂಬೋಸಿಸ್ ತೊಂದರೆಗೆ ಸಾಕಷ್ಟು ಜನರು ಒಳಗಾಗಿರುವುದು ಕಂಡುಬಂದಿದೆ. ಹಾಗೆಯೇ ಮೊದಲೇ ಹೃದಯದ ತೊಂದರೆ, ಸಕ್ಕರೆ ಕಾಯಿಲೆ ಇರುವವರು ಕೋವಿಶೀಲ್ಡ್ ಲಸಿಕೆ ಪಡೆದ ಮೇಲೆ ಸಾವು ಮಂಚವಾದುದು ಕೂಡ ಕೆಲವು ಕಡೆ ಕಂಡುಬಂದಿದೆ.


ಕೋವಿಡ್‍ನಿಂದ ಭಾರತದಲ್ಲಿ 4.45 ಕೋಟಿ ಜನರು ಚೇತರಿಸಿಕೊಂಡು ಪಾರಾಗಿದ್ದಾರೆ. ಭಾರತದಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 5.33 ಲಕ್ಷ ಎಂದು ತಿಳಿದುಬಂದಿದೆ. ಜಾಗತಿಕವಾಗಿ ಈ ಲೆಕ್ಕ ಇನ್ನೂ ದೊಡ್ಡದಿದೆ. ಭಾರತದಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮವು 2021ರ ಜನವರಿಯಿಂದ ಆರಂಭವಾಗಿದೆ. 175 ಕೋಟಿ ರೂಪಾಯಿಯ ಕೋವಿಶೀಲ್ಡ್, 38 ಕೋಟಿ ರೂಪಾಯಿಯ ಕೋವ್ಯಾಕ್ಸೀನ್, ಏಳೂವರೆ ಕೋಟಿ ರೂಪಾಯಿಯ ಕಾರ್ಬೆವ್ಯಾಕ್ಸ್ ಲಸಿಕೆಗಳನ್ನು ನೀಡಲಾಗಿದೆ. ಸರಕಾರವೇ ಕೋವಿಶೀಲ್ಡ್‍ಗೆ ಮುಖ್ಯತ್ವ ನೀಡಿರುವುದನ್ನು ಗಮನಿಸಬಹುದು. ಕಾರಣವು ಬಿಜೆಪಿಗೆ ದೇಣಿಗೆ ಎನ್ನುವುದು ಆರೋಪವಾಗಿದೆ.


2021ರ ಜನವರಿಯಿಂದ 2024ರ ಏಪ್ರಿಲ್ ಕೊನೆಯವರೆಗೆ ಭಾರತದಲ್ಲಿ ಕೊರೋನಾ ಲಸಿಕಾ ಅಭಿಯಾನ ನಡೆದು ಭಾರತೀಯರು ಒಟ್ಟು 220.69 ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ. ಲೋಕ ಆರೋಗ್ಯ ಸಂಸ್ಥೆಯೇ ಮೊದಲು ಕೋವಿಶೀಲ್ಡ್ ಸುರಕ್ಷಿತ ಎಂದಿತ್ತು. ಆದರೆ ಅದು ರಕ್ತ ಹೆಪ್ಪುಗಟ್ಟದಿರುವ ತ್ರೋಂಬೋಸಿಸ್ ತ್ರೋಂಬೋಸೈಟೋಪಿನಿಯಾ ಸಿಂಡ್ರೋಮ್ ಉಂಟು ಮಾಡುವುದನ್ನು ಕೆಲವು ದೇಶಗಳು ಸ್ವಂತ ಸಂಶೋಧನೆಯಿಂದ ಬಹು ಬೇಗನೆ ಕಂಡುಕೊಂಡವು. ಹಾಗಾಗಿ ಹಲವು ದೇಶಗಳಲ್ಲಿ ಕೋವಿಶೀಲ್ಡ್ ನಿಷೇಧಕ್ಕೊಳಗಾಗಿತ್ತು. ಇದನ್ನು ಮೊದಲು ನಿಷೇಧಿಸಿದ್ದು ಡೆನ್ಮಾರ್ಕ್. ಆಮೇಲೆ ಅಯರ್‍ಲ್ಯಾಂಡ್, ತಾಯ್‍ಲ್ಯಾಂಡ್, ನೆದರ್‍ಲ್ಯಾಂಡ್, ನಾರ್ವೆ, ಐಸ್‍ಲ್ಯಾಂಡ್, ಕಾಂಗೋ, ಬಲ್ಗೇರಿಯಾ, ಕೆನಡಾ, ಸ್ವೀಡನ್, ಸ್ಲೊವಾಕಿಯಾ ಮೊದಲಾದ ದೇಶಗಳು ಕೋವಿಶೀಲ್ಡ್ ನಿಷೇಧಿಸಿದ್ದವು.


ಯೂರೋಪಿನ ಮೆಡಿಸಿನ್ ಏಜೆನ್ಸಿಯು ಕೋವಿಶೀಲ್ಡ್‍ಗೆ ಗ್ರೀನ್ ಪಾಸ್ ನೀಡಿರಲಿಲ್ಲ, ಅಸ್ತ್ರಾಜೆನಿಕಾ ತಯಾರಿಸಿರುವ ಕೋವಿಶೀಲ್ಡ್‍ನಲ್ಲಿರುವ ಅಡೆನೋ ವೈರಸ್ ಲಸಿಕಾಂಶವು ಟಿಟಿಎಸ್ ಪ್ರಚೋದಿಸಿರಬಹುದು ಎಂಬ ಮಾತಿದೆಯಾದರೂ ಸ್ಪಷ್ಟವಿಲ್ಲ. ಈ ತ್ರೋಬೋಸಿಸ್‍ನಿಂದ ನೆತ್ತರಿನ ಪ್ಲೇಟಿಲೆಟ್ಸ್ ಕಿರುಬಿಲ್ಲೆಗಳು ಇಲ್ಲವಾಗಿ ನೆತ್ತರು ಹೆಪ್ಪುಕಟ್ಟುವ ಗುಣ ಕಳೆದುಕೊಳ್ಳುತ್ತದೆ. ಹಾಗಾದಾಗ ಗಾಯಗೊಂಡ ವ್ಯಕ್ತಿಯು ರಕ್ತಸ್ರಾವದಿಂದಲೇ ಸಾವಿಗೀಡಾಗುತ್ತಾನೆ. ಈ ಲಸಿಕೆಯಿಂದ ಎಲ್ಲರಿಗೂ ತೊಂದರೆಯಾಗಿಲ್ಲ ನಿಜ. ಆದರೆ ಹಲವರ ಪ್ರಾಣಕ್ಕೆ ಎರವಾದ ಲಸಿಕೆಯನ್ನು ಸರಕಾರವೇ ಒತ್ತಾಯ ಹೇರಿ ತೆಗೆದುಕೊಳ್ಳುವಂತೆ ಮಾಡಿತ್ತು ಎನ್ನುವುದನ್ನು ಮರೆಯುವಂತಿಲ್ಲ.

Related Posts

Leave a Reply

Your email address will not be published.