ಮಳೆಗಾಲದಲ್ಲಿ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡದೆ ಕಾರ್ಯಪ್ರವೃತ್ತರಾಗಬೇಕು : ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ಮಳೆಗಾಲದ ಸಂದರ್ಭದಲ್ಲಿ ಪಂಚಾಯತಿ ಪಿಡಿಓಗಳು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಕಾರ್ಯನಿರ್ವಹಿಸಬೇಕು. ಪೋನ್ ಸ್ವಿಚ್ ಆಫ್ ಮಾಡಿಕೊಳ್ಳದೆ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು, ಯಾವುದೇ ಸಮಸ್ಯೆ, ಅವಘಡಗಳು ಎದುರಾದರೂ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿ.ಸಿ.ರೋಡಿನ ಎಸ್‍ಜೆಎಸ್‍ಆರ್.ವೈ ಸಭಾಂಗಣದಲ್ಲಿ ನಡೆದ ಮುಂಗಾರು ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಜೀವಹಾನಿ, ಜಾನುವಾರು ಹಾನಿ, ನೆರೆ ಹಾವಳಿ, ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓಗಳು, ವಿಎಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‍ವೆಲ್‍ನಲ್ಲಿ ಕರೆಂಟ್ ಇಲ್ಲದೆ ಇದ್ದರೆ ನೀರು ಸರಬರಾಜಾಗುವುದಿಲ್ಲ ಎಂದು ನರಿಕೊಂಬು ಗ್ರಾ.ಪಂ. ಅಧ್ಯಕ್ಷೆ ವಿನುತ ಪುರುಷೋತ್ತಮ ಶಾಸಕರ ಗಮನಕ್ಕೆ ತಂದರು. ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನೀರಾವರಿ ಘಟಕಗಳಿಗೆ ಪವರ್‍ಕಟ್ ಮಾಡದೆ ವಿದ್ಯುತ್ ಒದಗಿಸುವಂತೆ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಬಂಟ್ವಾಳ ಸಿಡಿಪಿಓ ಕಚೇರಿ ವ್ಯಾಪ್ತಿಯಲ್ಲಿರುವ 40 ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಸಿಡಿಪಿಓ ಗಾಯತ್ರಿ ಕಂಬಳಿ ಸಭೆಯ ಗಮನಕ್ಕೆ ತಂದರು.
ಅಂಗನವಾಡಿ ಕೇಂದ್ರಗಳಿಗೆ ಸಣ್ಣ ಮಕ್ಕಳು ಬರುವುದರಿಂದ ಅವರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಸ್ವಲ್ಪ ವಿಂಬವಾಗಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ರಾಜ್ಯಮಟ್ಟದ ಅಧಿಕಾರಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. 12 ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆ ತಲುಪಿದ್ದು ದುರಸ್ತಿ ಪಡಿಸವಂತೆ ಕೆಆರ್‍ಡಿಎಲ್ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿನೆ ನೀಡುತ್ತಿಲ್ಲ ಎಂದು ಸಿಡಿಪಿಓ ದೂರಿದರು. ವಿಟ್ಲ ಸಿಡಿಪಿಓ ವ್ಯಾಪ್ತಿಯಲ್ಲಿ 15 ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಸಮಸ್ಯೆ ಇದೆ. ಮಳೆಹಾನಿ ಅನುದಾನದಡಿ 5 ಅಂಗನವಾಡಿ ಕಟ್ಟಡ ಮಂಜೂರಾಗಿದ್ದು 2 ಕಟ್ಟಡಗಳು ಪೂರ್ತಿಯಾಗಿದೆ ಎಂದು ವಿಟ್ಲ ಸಿಡಿಪಿಓ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬಿ.ಸಿ.ರೋಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಸತಿ ಶಾಲೆ ಶಿಥಿಲಗೊಂಡಿದ್ದು ಹೊಸ ಕಟ್ಟಡ ನಿಮಾಣಗೊಳ್ಳುವರೆಗೆ ವಸತಿ ಶಾಲೆಯನ್ನು ಬೆಂಜನಪದವು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ತಾಲೂಕಿನಲ್ಲಿ 3755 ಹೆಕ್ಟೇರ್ ಸಾಗುವಳಿ ಭೂಮಿ ಇದ್ದು ಮೊದಲ ಹಂತದಲ್ಲಿ 50 ಕ್ವಿಂಟಲ್ ಬಿತ್ತನೆ ಬೀಜ ದಾಸ್ತನು ಇರುವುದಾಗಿ ಕೃಷಿ ಅಧಿಕಾರಿ ತಿಳಿಸಿದರು.
ಬೇರೆ ಬೇರೆ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ದಿ ಪಡಿಸಬೇಕಾಗಿದ್ದು ಪುನರ್ ಪುಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಆ ಗಿಡಗಳನ್ನು ಬೆಳೆಸಲು ಗಮನ ಹರಿಸುವಂತೆ ಶಾಸಕರು ತೋಟಗಾರಿಕಾ ಇಲಾಖಾ ಅಧಿಕಾರಿ ಪ್ರದೀಪ್ ಡಿಸೋಜಾ ಅವರಿಗೆ ತಿಲಿಸಿದರು. ಹವಮಾನ ಆಧಾರಿತ ಬೆಳೆ ವಿಮೆಯ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ನೀಡುವ ಕಾರ್ಯ ಮಾಡಬೇಕೆಂದರು. ತಹಶೀಲ್ದಾರ ಎಸ್.ಬಿ. ಕೂಡಲಿಗಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವಿವಿಧ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳು ಆರ್‍ಐ, ವಿಎಗಳು ಉಪಸ್ಥಿತರಿದ್ದರು.