ಮಂಗಳೂರು: ರಾಯಿ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಭಿನ್ನಮತ ಸ್ಪೋಟ – ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯೆ ಪುಷ್ಪಾವತಿ ಪೂಜಾರಿ ರಾಜೀನಾಮೆ
ಮಂಗಳೂರು: ರಾಯಿ ಗ್ರಾಮ ಪಂಚಾಯತ್‍ನಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದು ಒಂದು ವಾರದಲ್ಲೇ ಬಿಜೆಪಿ ಭಿನ್ನಮತ ಸ್ಪೋಟಗೊಂಡಿದೆ. ಈ ಗ್ರಾ.ಪಂ.ವ್ಯಾಪ್ತಿಯ ಕೊಯಿಲ ಒಂದನೇ ವಾರ್ಡ್ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿ ಪೂಜಾರಿ ಗುರುವಾರ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನಾನು ಕೊಯಿಲ ಒಂದನೇ ವಾರ್ಡಿನ ಬೂತ್ ಸಂಖ್ಯೆ 27ರಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯೆಯಾಗಿದ್ದು, ನನ್ನ ವಾರ್ಡಿನಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಅನಗತ್ಯ ಹಸ್ತಕ್ಷೇಪ ನಡೆಸುತ್ತಿದ್ದಾರೆ. ನನ್ನ ವಾರ್ಡಿನಲ್ಲಿ ಸರ್ಕಾರದ ಅನುದಾನದಿಂದ ರಸ್ತೆ ಅಭಿವೃದ್ಧಿ ಮತ್ತು ರಿಪೇರಿ ಮುಂತಾದ ಕಾಮಗಾರಿಗಳನ್ನು ನನ್ನ ಗಮನಕ್ಕೆ ತಾರದೆ ನಡೆಸುತ್ತಿದ್ದು, ನನಗೆ ಅವಮಾನ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಗ್ರಾ.ಪಂ. ಅಧ್ಯಕ್ಷರು ಮತ್ತು ಪಿಡಿಒ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಶಾಸಕರು ಮತ್ತು ತಾ.ಪಂ.ಕಾರ್ಯನಿರ್ವಹಣಾಧಿಕಾರಿಗೂ ರಾಜೀನಾಮೆ ಪತ್ರ ನೀಡಿದ್ದಾರೆ. ಈ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.