ಬಂಟ್ವಾಳ: ಫೆ.21ರಿಂದ ಕಲ್ಲಡ್ಕ ಶ್ರೀರಾಮ ಮಂದಿರದ ಶತಾಬ್ದಿ ಸಂಭ್ರಮ
ಬಂಟ್ವಾಳ: 1924ರಲ್ಲಿ ಆರಂಭವಾದ ಕಲ್ಲಡ್ಕ ಶ್ರೀರಾಮ ಮಂದಿರದ ಶತಾಬ್ದಿ ಸಂಭ್ರಮ ಕಾರ್ಯಕ್ರಮ ಫೆ.21 ರಿಂದ ಫೆ.24 ರ ವರೆಗೆ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಶತಾಬ್ದಿ ಸಂಭ್ರಮ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.
ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ ಶತಾಬ್ದಿ ಕಾರ್ಯಕ್ರಮದಲ್ಲಿ ನೂತನವಾಗಿ ಶ್ರೀ ವಿದ್ಯಾಗಣಪತಿ ದೇವರ ಪ್ರತಿಷ್ಠೆ, ಶ್ರೀರಾಮಾಂಗಣ ಲೋಕಾರ್ಪಣೆ , ಮಾತೃ ಸಂಗಮ ಕಾರ್ಯಕ್ರಮ, 13 ಕೋಟಿ ರಾಮನಾಮ ತಾರಕ ಜಪಯಜ್ಞ ನಡೆಯಲಿದೆ. ಫೆ.21ರಂದು ಬುಧವಾರ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯ ನೇತ್ರಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ತೀರ್ಥ ಕಲಶಗಳನ್ನು ಮಂದಿರಕ್ಕೆ ತರುವುದು, ಬಳಿಒಕ ಧ್ವಜಾರೋಹಣ ನೆರವೇರಿ ಭಜನೆ ನಡೆಯಲಿರುವುದು ಬೆಳಿಗ್ಗೆ 10.30ಕ್ಕೆ ಶ್ರೀ ರಾಮವಿದ್ಯಾಕೇಂದ್ರದ ಮಕ್ಕಳಿಂದ ಸರಸ್ವತಿ ಪೂಜೆ ನಡೆಯಲಿದೆ., ಸಂಜೆ ೪ ಗಂಟೆಗೆ ಮಂದಿರದ ಸುತ್ತಮುತ್ತಲಿನ ಭಾಗದಿಂದ ಆಗಮಿಸಿದ ಹೊರಕಾಣಿಕೆಯನ್ನು ನರಹರಿ ಪರ್ವತ ದ್ವಾರದ ಬಳಿಯಿಂದ ಕಲ್ಲಡ್ಕ ಶ್ರೀರಾಮ ಮಂದಿರದವರೆಗೆ ವೈಭವದ ಮೆರವಣಿಗೆ ಮೂಲಕ ಬರಲಿದೆ. ಬಳಿಕ ಉಗ್ರಾಣ ಮುಹೂರ್ತ ನೆರವೇರಿ ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ರಾತ್ರಿ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಫೆ. 22ರಂದು ಬೆಳಿಗ್ಗೆ 7.30ಕ್ಕೆ 108 ತೆಂಗಿನಕಯಿಯ ಗಣಪತಿ ಹವನ, ಅಥರ್ವಶೀರ್ಷ ಹವನ, ಪ್ರತಿಷ್ಠಾನ ಹವನ ನಡೆಯಲಿದೆ. 11 ಗಂಟೆಗೆ ಬೆಳಗಾವಿ ನಿಡಸೋಸಿ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವರು, ಕೊಲ್ಹಾಪುರ ಶ್ರೀ ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ರೀ ರಾಮಾಂಗಣ ಲೋಕಾರ್ಪಣೆ ಮಾಡುವರು, 11.20 ರಿಂದ 11.40ರ ವೃಷಭ ಲಗ್ನ ಮುಹೂರ್ತದಲ್ಲಿ ಚಿತ್ರದುರ್ಗ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಶ್ರೀ ವಿದ್ಯಾಗಣಪತಿ ದೇವರ ಪ್ರಾಣ ಪ್ರತಿಷ್ಠೆ ಮಾಡುವರು. 12 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಮುಖ್ಯ ಭಾಷಣ ಮಾಡುವರು ಎಂದು ತಿಳಿಸಿದರು. ಸಂಜೆ 6 ಗಂಟೆಗೆ ವೀರ ಸಾವರ್ಕರ್ ಬದುಕಿನ ಕಥಾನಕ ಕರಿನೀರ ವೀರ ನಡೆಯಲಿದೆ. ಫೆ.23 ರಂದು ಬೆಳಿಗ್ಗೆ 10.30ಕ್ಕೆ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. 12 ಗಂಟೆಗೆ ಮಾತೃ ಸಂಗಮ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ಭವತಾರಿಣಿ ಆಶ್ರಮದ ಸಾಧ್ವಿ ಮಾತಾ ವಿವೇಕಮಯಿ ಆಶೀರ್ವಚನ ನೀಡುವರು, ಮುಖ್ಯ ಅತಿಥಿಯಾಗಿ ಹುತಾತ್ಮ ವೀರಯೋಧ ಕ್ಯಾ. ಎಂ.ವಿ.ಪ್ರಾಂಜಲ್ ಅವರ ತಾಯಿ ಕೆ. ಆರ್. ಅನುರಾಧ ವೆಂಕಟೇಶ್ ಭಾಗವಹಿಸುವರು. ಡಾ. ಕಮಲಾ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸುವರು. ಸಂಜೆ 6 ಗಂಟೆಗೆ ಸ್ವಾನುಭೂತಿ ಭಜನಾ ಕಾರ್ಯಕ್ರಮ ನಡೆಯಲಿದೆ. ಫೆ. 24ರಂದು 11 ಗಂಟೆಗೆ ರಾಮನಾಮ ತಾರಕ ಜಪಯಜ್ಞ ಪ್ರಾರಂಭಗೊಂಡು 11.30ಕ್ಕೆ ಪೂರ್ಣಹುತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹೊಸನಗರ ಶ್ರೀರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸುವರು, ಮಧ್ಯಾಹ್ನ 2 ಗಂಟೆಗೆ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ ನಡೆಯಲಿದೆ ಎಂದರು.
ವಾಸ್ತು ತಜ್ಞರ ಸಲಹೆಯ ಮೇರೆಗೆ ಪ್ರಶ್ನಾ ಚಿಂತನೆಯ ಪ್ರಕಾರ ಗಣಪತಿ ಪ್ರತಿಷ್ಟಾಪನೆ ಮಾಡಲಾಗುತ್ತಿದ್ದು 6.25 ಅಡಿ ಎತ್ತರದ ವಿಗ್ರಹ ಇದಾಗಿದೆ. ಕಲ್ಲಡ್ಕ ಶ್ರೀ ರಾಮ ಮಂದಿರ ಅನೇಕ ರಾಷ್ಟ್ರೀಯ ಹೋರಾಟಗಳಲ್ಲಿ ಭಾಗಿಯಾಗಿ, ಸಾಮಾಜಿಕ ಕಾರ್ಯಗಳಿಗೆ ಸಾಕ್ಷಿಯಾಗಿದೆ. ರಾಮಮಂದಿರದ ಪ್ರೇರಣೆಯಿಂದ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆ ಹುಟ್ಟಿಕೊಂಡಿದ್ದು, ಇದೀಗ ರಾಷ್ಟ್ರೀಯ ಚಿಂತನೆಯ ಶಿಕ್ಷಣದ ಮೂಲಕ ದೇಶದಲ್ಲಿ ಹೆಸರು ಪಡೆದಿದೆ. ಇದರ ಜೊತೆಗೆ ಕಲ್ಲಡ್ಕದಿಂದ ಎರಡು ಶಾಸಕರಾಗಿ ಆಯ್ಕೆಯಾಗಿರುವುದು ಇದೇ ರಾಮಮಂದಿರದ ಕೃಪೆಯಿಂದ ಎಂದು ಅವರು ತಿಳಿಸಿದರು. ದೇವರು ಮತ್ತು ದೇಶ ಎಂಬ ಎರಡು ಚಿಂತನೆಯನ್ನು ಈ ರಾಮಮಂದಿರಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಪಡೆಯಬೇಕು ಎಂಬ ಯೋಚನೆ ನಮ್ಮದಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಸೋಮಯಾಜಿ, ಶತಾಬ್ದಿ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನಪ್ಪ ಆರ್.ಕೋಟ್ಯಾನ್, ನಾಗೇಶ್ ಕಲ್ಲಡ್ಕ, ಕ. ಕೃಷ್ಣಪ್ಪ, ಮಾಧ್ಯಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಕೊಟ್ಟಾರಿ ಉಪಸ್ಥಿತರಿದ್ದರು.