ಬೆಳ್ತಂಗಡಿ: ಸ್ವರಾಜ್ ಆತ್ಮಹತ್ಯೆಗೆ ಲೋನ್ ಆ್ಯಪ್ ಕಿರುಕುಳ ಕಾರಣವೇ?
ಬೆಳ್ತಂಗಡಿಯ ಪುದುವೆಟ್ಟುನಲ್ಲಿ ಗುರುವಾರ ಕಬಡ್ಡಿ ಆಟಗಾರ, 24ರ ಹರೆಯದ ಸ್ವರಾಜ್ ಆತ್ಮಹತ್ಯೆ ಮಾಡಿಕೊಳ್ಳಲು ಲೋನ್ ಆ್ಯಪ್ ಕಿರುಕುಳವೇ ಕಾರಣ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ, ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸ್ವರಾಜ್ ನಿನ್ನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿರುವ ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ. ಇದೀಗ ಆತ ಲೋನ್ ಆ್ಯಪ್ ಮೂಲಕ ಪಡೆದ ಸಾಲವೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ.
ಸ್ವರಾಜ್ ಕೆಲ ತಿಂಗಳಿನಿಂದ ಎರಡು ಮೂರು ಲೋನ್ ಆ್ಯಪ್‍ಗಳಲ್ಲಿ ಸಾಲ ಪಡೆದಿದ್ದ. ಆಗಾಗ್ಗೆ ಲೋನ್ ಪಾವತಿ ಮಾಡಿದ್ದರೂ ಹೆಚ್ಚಿನ ಹಣಕ್ಕೆ ಕಂಪನಿಯ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು. ಸ್ವರಾಜ್ ತನ್ನ ವಾಟ್ಸಪ್ ಡಿಪಿಯಲ್ಲಿ ಅಕ್ಕನ ಮಗಳ ಫೆÇೀಟೋ ಹಾಕಿದ್ದು, ಇದನ್ನೇ ಬಂಡವಾಳವನ್ನಾಗಿಸಿದ ಕಂಪನಿ ಫೋಟೋ ಎಡಿಟ್ ಮಾಡಿ ಚೈಲ್ಡ್ ಫಾರ್ ಸೇಲ್ ಎಂದು ಹಾಕಿ ಆತನ ಕಾಂಟೆಕ್ಟ್ ಲಿಸ್ಟ್‍ಗೆ ಸೆಂಡ್ ಮಾಡಿದ್ದರು.
ಈ ವಿಚಾರವನ್ನು ಸ್ನೇಹಿತರು ಸ್ವರಾಜ್‍ಗೆ ತಿಳಿಸಿದ್ದು ಬಳಿಕ ಆಗಸ್ಟ್ 30 ರಂದು ತನ್ನ ಬ್ಯಾಂಕ್ ಖಾತೆಯಿಂದ ಆ್ಯಪ್ ಕಂಪನಿಗೆ 30 ಸಾವಿರ ಕಟ್ಟಿದ್ದ. ಇನ್ನುಳಿದ ಹಣಕ್ಕೆ ನಿನ್ನೆ ಮಧ್ಯಾಹ್ನ 2 ಗಂಟೆಯವರೆಗೆ ಡೆಡ್ ಲೈನ್ ನೀಡಿದ್ದರು. ಆದರೆ ಹಣ ಹೊಂದಿಸಲು ಸಾಧ್ಯವಾಗದೆ ಮನನೊಂದು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.