ವಿಟ್ಲದ ನೀರಕಣಿ ಜೆ.ಎಲ್. ಅಡಿಟೋರಿಯಂನಲ್ಲಿ ಸೆ.2 ಮತ್ತು 3ರಂದು ಬೃಹತ್ ಸಸ್ಯಮೇಳ, ಆಹಾರ ಮೇಳ, ವಸ್ತು ಪ್ರದರ್ಶನ

ವಿಟ್ಲದ ನೀರಕಣಿ ಜೆ.ಎಲ್. ಅಡಿಟೋರಿಯಂನಲ್ಲಿ ಸೆಪ್ಟೆಂಬರ್ 2 ಹಾಗೂ 3ರಂದು ಬೃಹತ್ ಸಸ್ಯಮೇಳ, ಆಹಾರ ಮೇಳ, ವಸ್ತು ಪ್ರದರ್ಶನ, ಮಾರಾಟ ಹಾಗೂ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ಮೇಳದ ಅಧ್ಯಕ್ಷ ಜಯರಾಮ್ ಬುಳೇರಿಕಟ್ಟೆ ತಿಳಿಸಿದ್ದಾರೆ.

ವಿಟ್ಲದ ಪಂಚಮಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.

ವಿವಿಧ ತಳಿಯ ಸಸ್ಯಗಳು, ನೂರಕ್ಕೂ ಹೆಚ್ಚಿನ ಸ್ಟಾಲ್‍ಗಳು, ಕರಾವಳಿ ಹಲಸಿನ ದೋಸೆ ಸೇರಿದಂತೆ ಸುಮಾರು 60 ಬಗೆಯ ದೋಸೆಗಳು, ಉತ್ತರ ಕನ್ನಡದ ವಿವಿಧ ಖಾದ್ಯಗಳು, ಹಲಸಿನ ಗೋಬಿ ಮಂಚೂರಿ, ಆಟಿ ತಿಂಗಳ ಸ್ಪೆಷಲ್ ತಿಂಡಿಗಳು, ಜೋಳದ ರೊಟ್ಟಿ, ರಾಗಿ ಮುದ್ದೆ, ಧಾರವಾಡ ಕರದಂಟು ಮುಂತಾದ ಸಾಂಪ್ರದಾಯಿಕ ವಿವಿಧ ಶೈಲಿಯ ಖಾದ್ಯಗಳನ್ನು ಮೇಳದಲ್ಲಿ ಸವಿಯಬಹುದು ಎಂದು ಅವರು ತಿಳಿಸಿದರು.

ಮೇಳದಲ್ಲಿ ಸುಮಾರು ಸಾವಿರಕ್ಕೂ ಮೀರಿ ವಿವಿಧ ಬಗೆಯ ಔಷಧೀಯ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು, ಹಣ್ಣಿನ ಗಿಡಗಳು ಲಭ್ಯವಿರುತ್ತದೆ. ಸಂಜೆ ಗಂಟೆ 5ರಿಂದ ಕರಾವಳಿಯ ಖ್ಯಾತ ಹಿನ್ನಲೆ ಗಾಯಕರಾದ ಪ್ರಕಾಶ್ ಮಹಾದೇವನ್ ಹಾಗೂ ರೂಪ ಪ್ರಕಾಶ್ ಮಹಾದೇವನ್ ತಂಡದವರಿಂದ ಖ್ಯಾತ ನಿರೂಪಕ ಚೇತನ್ ಶೆಟ್ಟಿಯವರ ನಿರೂಪಣೆಯಲ್ಲಿ, ಕರಾವಳಿಯ ಪ್ರಸಿದ್ಧ ಸಂಗೀತ ಕಲಾವಿದರ ಕೂಡುವಿಕೆಯೊಂದಿಗೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಎರಡೂ ದಿನವೂ ನಡೆಯಲಿದೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಹಾಸ್ಯ ನಟ ಅರವಿಂದ್ ಬೋಳಾರ್ ಭಾಗವಹಿಸಲಿದ್ದಾರೆ. ಸ್ಪೀಕರ್ ಯು.ಟಿ ಖಾದರ್, ಶಾಸಕರಾದ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸೆ.3ರಂದು ವಿಟ್ಲದ ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಭರತ್ ಜೈನ್, ವಿಟ್ಲ ಅರಮನೆಯ ಜಯರಾಮ್ ಬಲ್ಲಾಳ್, ಮಂಜುನಾಥ ಎಸ್ ವಿಟ್ಲ ಉಪಸ್ಥಿತರಿದ್ದರು.

Related Posts

Leave a Reply

Your email address will not be published.