ಬೆಳ್ತಂಗಡಿ: ಸ್ಯಾಕ್ರೋಫೋನ್ ಕಲಾವಿದ ಡಿ.ಬಿ.ಪ್ರಕಾಶ ದೇವಾಡಿಗರಿಗೆ ಅಮೇರಿಕದ ಪುತ್ತಿಗೆ ಮಠದಲ್ಲಿ “ಕೃಷ್ಣಾನುಗ್ರಹ ಪತ್ರ” ಪ್ರದಾನ
ಬೆಳ್ತಂಗಡಿ: ಸ್ಯಾಕ್ಸೋಫೋನ್ ವಾದನ ಕ್ಷೇತ್ರದಲ್ಲಿ ರಾಜ್ಯದ ಅತ್ಯುನ್ನತ ಕಲಾವಿದ, ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರೂ ಆಗಿರುವ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗರಿಗೆ ಅಮೇರಿಕಾದ ಪುತ್ತಿಗೆ ಮಠದಲ್ಲಿ “ಕೃಷ್ಣಾನುಗ್ರಹ ಪತ್ರ” ಮನ್ನಣೆ ದೊರೆತಿದೆ.
ಅಮೇರಿಕಾದ ಫಿನಿಕ್ಸ್‌ನ ಪುತ್ತಿಗೆ ಮಠದ ಪೀಠಾದಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅವರ ಮೂರನೇ ಬಾರಿಯ ಅಮೇರಿಕಾ ಕಲಾ ಪ್ರವಾಸದ ವೇಳೆ ನೀಡಿದ ಕಲಾ ಸೇವೆಯನ್ನು ಗೌರವಿಸಿ ಈ ಪುರಸ್ಕಾರ ಪತ್ರ ನೀಡಿ ಅಭಿನಂದಿಸಿದರು.
ಅಮೆರಿಕಾದ ಅರಿಝೇನಾ ಎಂಬಲ್ಲಿರುವ ಸುಜ್ಞಾನ ರಿಲಿಜಿಯಸ್ ಎಂಡ್ ಚಾರಿಟೇಬಲ್ ಫೌಂಡೇಶನ್ ವೆಂಕಟಕೃಷ್ಣ ದೇವಸ್ಥಾನದಲ್ಲಿ ಅ.೨೮ ರಿಂದ ನ.೪ ರ ವರೆಗೆ ನಡೆದ ’ ಶ್ರೀ ಯಜುರ್ವೇದ ಸಂಹಿತ ಯಾಗ’ ಮತ್ತು ’ಸಹಸ್ರ ಅತರ್ವ ಶ್ರೀರ್ಶ ಮಹಾಗಣಪತಿ ಯಾಗ’ ಕಾರ್ಯಕ್ರಮದಲ್ಲಿ ಪ್ರಕಾಶ ದೇವಾಡಿಗ ಅವರು ಭಾರತೀಯ ಸಾಂಪ್ರದಾಯಿಕ ಸ್ಯಾಕ್ಸೋಫೋನ್ ವಾದನವನ್ನು ಮನೋಜ್ಞವಾಗಿ ನಡೆಸಿಕೊಟ್ಟಿದ್ದರು.
ಅವರು ಈ ಬಾರಿ ಭಾರತದಿಂದ ಆಹ್ವಾನಿತರಾಗಿ ಅಮೆರಿಕಕ್ಕೆ ಮೂರನೇ ಬಾರಿಗೆ ಪ್ರಯಾಣ ಕೈಗೊಂಡಿದ್ದರು. ಸ್ವಾಮೀಜಿಗಳು ಪುರಸ್ಕಾರ ಪ್ರದಾನ ಮಾಡುವ ವೇಳೆ ಮಠದ ಪ್ರಧಾನ ಅರ್ಚಕ ಕಿರಣ್ ರಾವ್ ಉಜಿರೆ ಹಾಗೂ ಸ್ವಾಮೀಜಿಗಳ ಧಾರ್ಮಿಕ ಕೈಂಕರ್ಯದ ಪರಿವಾರ ಬಂಧುಗಳು ಉಪಸ್ಥಿತರಿದ್ದರು.