ಜ. 4 ಮತ್ತು 5 ರಂದು ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸ್ನೇಹ ಸಮ್ಮೇಳನ

ಬೆಂಗಳೂರು; ಹಿಂದೂ ಧರ್ಮದಲ್ಲಿ ಜಾತಿಯ ಮೇಲು ಕೀಳು ತಾರತಮ್ಯ ನಿವಾರಣೆಗಾಗಿ ಬೆಳಗಾವಿಯ ಗೋಕಾಕ ತಾಲ್ಲೂಕಿನ ಮನ್ನಿಕೇರಿ ಮಹಾಂತಲಿಂಗೇಶ್ವರ ಮಠದಲ್ಲಿ ಜ. 4 ಮತ್ತು 5 ರಂದು ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸ್ನೇಹ ಸಮ್ಮೇಳನ ಆಯೋಜಿಸಿದ್ದು, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ ಜನ ಜಾಗೃತಿ ಮೂಡಿಸಲಾಗುತ್ತಿದೆ.
ಹಿಂದೂ ಧರ್ಮದ ಉದಾತ್ತ ಚಿಂತನೆಗಳನ್ನು ಅಳವಡಿಸಿಕೊಂಡು ಎಲ್ಲಾ ಜಾತಿ, ಜನಾಂಗದವರು ಸಮಾನರು ಎಂಬುದನ್ನು ನಿರೂಪಿಸಲು ಇಂತಹ ಸಮಾವೇಶ ಏರ್ಪಡಿಸಲಾಗಿದೆ ಎಂದು ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಸಿದ್ಧೇಶ್ವರ ಸ್ವಾಮಿಜಿ ತಿಳಿಸಿದ್ದಾರೆ.
ಲವ್ ಜಿಹಾದ್‌ನಂಥಹ ಪ್ರಕರಣಗಳನ್ನು ತಪ್ಪಿಸಲು ಮತ್ತು ಹಿಂದುಗಳು ಮತಾಂತರವಾಗುವುದನ್ನು ತಡೆಗಟ್ಟಲು ಹಾಗೂ ಹಿಂದುಗಳಲ್ಲಿನ ಮೇಲು ಕೀಳು ಜಾತಿವ್ಯವಸ್ಥೆಯನ್ನು ತೊಡೆದು ಹಾಕಲು ಮನ್ನಿಕೇರಿಯಲ್ಲಿ ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹ ಸಂಘ ಕಳೆದ ವರ್ಷ ಅಸ್ತಿತ್ವಕ್ಕೆ ಬಂದಿದೆ. ಇದುವರಗೆ ಮೂವತ್ತು ಸಾವಿರಕ್ಕೂ ಹೆಚ್ಚು ಅಂತರ್ಜಾತಿ ವಿವಾಹಿತರು ಸದಸ್ಯರಾಗಿದ್ದಾರೆ. ಸಂಘದ ಎರಡನೇ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಈ ಸಮಾವೇಶ ನಡೆಯಲಿದೆ.
ಜ.4 ರ ಬುಧವಾರ ಬೆಳಿಗ್ಗೆ 10 ಘಂಟೆಗೆ ಅಂತರ್ಜಾತಿ ವಿವಾಹಿತರ ಸ್ನೇಹ ಸಮ್ಮೇಳನವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಸಂಘದ ಸಂಸ್ಥಾಪಕ ಅಧ್ಯಕ್ಷ ವಿಜಯಸಿದ್ಧೇಶ್ವರ ಸ್ವಾಮೀಜಿ, ಡಾ|| ಆರೂಢ ಭಾರತಿ ಸ್ವಾಮೀಜಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3.00 ಘಂಟೆಗೆ ಜಾತ್ಯಾತೀತ ವಧುವರಾನ್ವೇಷಣಾ ಸಭೆ, 4.30ಕ್ಕೆ ಸಂಘದ ರಚನಾತ್ಮಕ ಚಟುವಟಿಕೆಗಳು ಕುರಿತು ಸಮಾಲೋಚನೆ ನಡೆಯಲಿದೆ. ರಾತ್ರಿ 7.30 ಕ್ಕೆ ವಿರಾಟ್ ಹಿಂದೂ ಧರ್ಮ ಕುರಿತು ಜಾಗೃತಿಯ ಸಮಾವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಈ ಸಮಾವೇಶವನ್ನು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಖ್ಯಾತ ವಾಗ್ನಿ ಜಗದೀಶ ಕಾರಂತ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಸದ ಈರಣ್ಣ ಕಡಾಡಿ ಮೊದಲಾದವರು ಭಾಗವಹಿಸುವರು. ಇದೇ ಸಂದರ್ಭದಲ್ಲಿ “ಜಾತ್ಯಾತೀರ ಜ್ಯೋತಿ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮರು ದಿನ ಬೆಳಿಗ್ಗೆ ಸಹಭೋಜನ, ಅಂತರ್ಜಾತಿ ವಿವಾಹಿತ ಹಿಂದೂ ಮಾತೆಯರಿಗೆ ಉಡಿ ತುಂಬುವ, ಮಠದ ಸಭಾ ಭವನ, ಪ್ರಸಾದ ನಿಲಯ, ಹಾಗೂ ಅತಿಥಿ ಗೃಹಗಳ ಉದ್ಘಾಟನೆ ನಡೆಯಲಿದೆ. 11.00 ಘಂಟೆಗೆ ವಿರಾಟ ಹಿಂದೂ ಧರ್ಮ ಜಾಗೃತಿಯ ಬೃಹತ್ ಸಮಾವೇಶವನ್ನು ಕಣ್ಣೀರಿ ಮಠದ ಜಗದ್ಗುರು ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಬಾಲಚಂದ್ರ ಜಾರಕಿಹೊಳಿ, ಮೊದಲಾದ ಗಣ್ಯರು ಹಲವು ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.