ಬೆಂಗಳೂರು: ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯಾಗಿ ಮಾನ್ಯತೆ ನೀಡಲು ಪ್ರಯತ್ನ: ಸಿಎಂ ಸಿದ್ದರಾಮಯ್ಯ
ರಾಜ್ಯದ ಪ್ರಮುಖ ಭಾಷೆಯಾದ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯಾಗಿ ಮಾನ್ಯತೆ ನೀಡಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅರಮನೆ ಮೈದಾನದಲ್ಲಿ ಆರಂಭಗೊಂಡಿರುವ ‘ಬೆಂಗಳೂರು ಕಂಬಳನಮ್ಮ ಕಂಬಳ’ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪುರಾತನ ಕಾಲದಿಂದ ಬಂದಿರುವ ಕಂಬಳವು ಕರಾವಳಿಯ ಜಾನಪದ ಕಲೆ. ಅದು ಬೆಂಗಳೂರಿನಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಕರಾವಳಿಯ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ ಈ ಕಲೆಗೆ ಬೆಂಗಳೂರಿನಲ್ಲೂ ಪ್ರೋತ್ಸಾಹ ಕಲ್ಪಿಸಬೇಕು ಎಂದು ಅವಕಾಶ ನೀಡಲಾಗಿದೆ. ಪ್ರತಿವರ್ಷ ಕಂಬಳ ಮಾಡಿ ಎಂದು ಸಲಹೆ ನೀಡಿದರು.
‘ತುಳುವರಿಗೆ ಭಾಷಾಭಿಮಾನ ಜಾಸ್ತಿ. ಕನ್ನಡ, ಹಿಂದಿ, ಇಂಗ್ಲಿಷ್ ಗೊತ್ತಿರುವ ಇಬ್ಬರು ತುಳುವರು ಸಿಕ್ಕರೆ ತುಳುವಿನಲ್ಲೇ ಮಾತು ಆರಂಭಿಸುತ್ತಾರೆ’ ಎಂದು ಶ್ಲಾಘಿಸಿದರು.
ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ‘ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಕಂಬಳ ಸಮುದಾಯ ಭವನ ನಿರ್ಮಾಣಕ್ಕೆ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಒದಗಿಸಬೇಕು ಎಂದು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ ಕುಮಾರ್ ರೈ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.