ಮೂಡುಬಿದಿರೆ: ಮಾ.12ರಂದು ವಿದೇಶಿ ಅಡಿಕೆ ಆಮದನ್ನು ನಿಷೇಧಿಸುವಂತೆ ಆಗ್ರಹಿಸಿ ಹಕ್ಕೊತ್ತಾಯ ಪ್ರತಿಭಟನಾ ಜಾಥಾ

ಮೂಡುಬಿದಿರೆ: ವಿದೇಶಿ ಅಡಿಕೆ ಆಮದನ್ನು ನಿಷೇಧಿಸಬೇಕು, ತೆಂಗು ಖರೀದಿ ಕೇಂದ್ರವನ್ನು ಪ್ರಾರಂಭಿಸಬೆಕು ಮತ್ತು  ಹೊಸ ಅಡಿಕೆಗೆ ಪ್ರತೀ ಕೆ.ಜಿಗೆ 400/- ರೂಪಾಯಿ ಬೆಂಬಲ ಬೆಲೆಯನ್ನು  ಘೋಷಿಸಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಮಾ.೧೨ರಂದು  ಹಕ್ಕೋತ್ತಾಯ ಪ್ರತಿಭಟನಾ ಜಾಥಾವು ನಡೆಯಲಿದೆ ಎಂದು ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಉಪಾಧ್ಯಕ್ಷ ವಲೇರಿಯನ್ ಕುಟಿನ್ಹ ತಿಳಿಸಿದರು.

ಅವರು ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರ ಪ್ರಮುಖ ಬೆಳೆ ಅಡಿಕೆಯಾಗಿದೆ. ವಿದೇಶಿ ಕಳಪೆ ಅಡಿಕೆ ಅಕ್ರಮವಾಗಿ ದೇಶದೊಳಗೆ ಬರುತ್ತಿರುವುದರಿಂದ ದೇಶೀ ಅಡಿಕೆಯ ಬೆಲೆ/ಧಾರಣೆಯು ತೀವ್ರ ಕುಸಿತ ಕಂಡಿದೆ. ಭಾರತ ದೇಶದಲ್ಲಿ ಸುಮಾರು5 ಕೋಟಿಗೂ ಹೆಚ್ಚು ಜನ ಅಡಿಕೆ ಕೃಷಿಯನ್ನು ಅವಲಂಭಿಸಿ ಜೀವನ ನಡೆಸುತ್ತಿದ್ದಾರೆ.

ಕರ್ನಾಟಕ ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆಯನ್ನು ತಮ್ಮ ಜೀವನಾಧಾರ ಹಾಗೂ ಪ್ರಮುಖ ಬೆಳೆಯಾಗಿ ಅವಲಂಬಿಸಿಕೊಂಡಿರುತ್ತಾರೆ. ಪ್ರತೀ ವರ್ಷ ಮಲೇಶಿಯಾ ಇಂಡೋನೇಷಿಯಾ, ಬರ್ಮ, ಶ್ರೀಲಂಕಾ, ಮ್ಯಾನ್ಮಾರ್ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯು ಆಮದು ಮತ್ತು ಕಳ್ಳ ಸಾಗಾಣಿಕೆಯ ಮೂಲಕ ಬರುತ್ತಿದೆ. ಇದನ್ನು ತಡೆಯುವಲ್ಲಿ ನಮ್ಮ ಸರಕಾರಗಳು ವಿಫಲವಾಗಿವೆ.

ಅಡಿಕೆಯ ಬೆಲೆ ತೀವ್ರ ಕುಸಿತವಾಗಿದ್ದರೂ ಕೇಂದ್ರ ಸರ್ಕಾರ ಅಡಿಕೆ ಆಮದನ್ನು ಸಂಪೂರ್ಣ ನಿರ್ಬಂಧಿಸುವ ಮತ್ತು ಕಳ್ಳ ಸಾಗಾಣಿಕೆಯ ವಿರುದ್ಧ ಕಠಿಣವಾದ ಕಾನೂನನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವುದು ನಮ್ಮೆಲ್ಲರ ದುರಂತವಾಗಿದೆ. ಅಡಿಕೆಗೆ ಬೆಂಬಲ ಬೆಲೆಯನ್ನು ಘೋಷಿಸುವಲ್ಲಿ ರಾಜ್ಯ ಸರ್ಕಾರವು ನಿಷ್ಕ್ರಿಯತೆಯನ್ನು ತೋರಿಸುತ್ತಿದೆ.

ಅಡಿಕೆಗೆ 350/- ರೂಪಾಯಿ ಬೆಂಬಲ ಬೆಲೆಯನ್ನು ಘೋಷಿಸಿದ್ದರೂ, ಹೊಸ ಅಡಿಕೆ, ಹಳೆ ಅಡಿಕೆ (ಸಿಂಗಲ್-ಡಬಲ್ ಚೋಲ್) ಇದರಲ್ಲಿ ಯಾವುದಕ್ಕೆ ಬೆಂಬಲ ಬೆಲೆಯೆಂದು ಸ್ಪಷ್ಟವಾಗಿ ನಮೂದಿಸದೆಯಿರುವುದರಿಂದ ಅಡಿಕೆ ಖರೀದಿದಾರರು ರೈತರನ್ನು ಮೋಸಗೊಳಿಸುತ್ತಿದ್ದಾರೆ. ರೈತರು ನಿರಂತರ ಅನ್ಯಾಯ, ಶೋಷಣೆಗೆ ಒಳಗಾಗುತ್ತಿದ್ದರೂ ಯಾವುದೇ ಸರ್ಕಾರಗಳು ಈ ಬಗ್ಗೆ ಕಠಿಣವಾದ ಕಾನೂನನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ.

ತೆಂಗಿನ ಎಣ್ಣೆಗೆ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವುದರಿಂದ ಜನರ ಆರೋಗ್ಯ ಕೆಡುತ್ತಿದೆ. ಕೊಪ್ಪರ ಬೆಲೆಯ ಜೊತೆ ತೆಂಗಿನೆಣ್ಣೆಯ ಬೆಲೆ ಯಾವುದೇ ಏರಿಳಿತವಾಗಿರುವುದಿಲ್ಲ. ಇದರ ವಿರುದ್ಧ ಸರ್ಕಾರ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕೃಷಿಕರ ಕಳವಳಕ್ಕೆ ಕಾರಣವಾಗಿದೆ.

ಸುದ್ದಿಗೋಷ್ಟಿಯಲ್ಲಿ  ಮಾರ್ಪಾಡಿ ಕಲ್ಲಬೆಟ್ಟು ಗ್ರಾಮ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಕರಿಂಜೆ ಕಿಸಾನ್ ಪ್ರಮುಖರಾದ ಚಂದ್ರಶೇಖರ ಕೋಟ್ಯಾನ್, ಶಿರ್ತಾಡಿ ಗ್ರಾಮ ಸಮಿತಿ ಅಧ್ಯಕ್ಷ ದಯಾನಂದ ಎನ್.ಶೆಟ್ಟಿ, ಪ್ರಗತಿಪರ ಕೃಷಿಕ, ಕಿಸಾನ್ ಪ್ರಮುಖರಾದ ಜೋಯ್ಲಸ್ ಡಿ’ಸೋಜಾ ಹಾಗೂ ವಸಂತ್ ಭಟ್ ಪಯ್ಯಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.