ಸೆ.10ರಂದು ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮ ದಿನಾಚರಣೆ ಪುತ್ತೂರಿನಲ್ಲಿ ನಡೆದ ವಾಹನ ಜಾಥಾ
ಪುತ್ತೂರು: ಸೆ.10ರ ಶನಿವಾರದಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನಲ್ಲಿ ವಾಹನ ಜಾಥಾ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಇವುಗಳ ಆಶ್ರಯದಲ್ಲಿ ನಡೆದ ವಾಹನ ಜಾಥಾಕ್ಕೆ ನಗರದ ದರ್ಬೆ ಬೈಪಾಸ್‍ನ ಫಾ. ಪತ್ರಾವೋ ವೃತ್ತದಲ್ಲಿ ಚಾಲನೆ ನೀಡಲಾಯಿತು. ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ನಾರಾಯಣ ಗುರು ಮಂದಿರದ ನಿಕಟಪೂರ್ವ ಕಾರ್ಯ ನಿರ್ವಹಣಾಧಿಕಾರಿ ಆರ್.ಸಿ. ನಾರಾಯಣ್ ಹಳದಿ ಧ್ವಜ ಹಸ್ತಾಂತರ ಮಾಡಿದರು.
ಹಳದಿ ಪತಾಕೆ ಅಳವಡಿಸಿಕೊಂಡಿದ್ದ ಕಾರು, ಬೈಕ್ ಮತ್ತಿತರ ವಾಹನಗಳಲ್ಲಿ ಜಾಥಾ ನಡೆಸಲಾಯಿತು. ಮುಖ್ಯ ರಸ್ತೆಯಲ್ಲಿ ದರ್ಬೆ ವೃತ್ತ, ಕಲ್ಲಾರೆ, ಬಸ್ ನಿಲ್ದಾಣ, ಪ್ರಧಾನ ಅಂಚೆ ಕಚೇರಿ ಮೂಲಕ ಸಾಗಿ ಸಂತೆಕಟ್ಟೆ ರಸ್ತೆ, ಕಿಲ್ಲೆ ಮೈದಾನದ ಎದುರು ಕವಲೊಡೆದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಸಂಪನ್ನಗೊಂಡಿತು. ಸಂಘದ ಕಾರ್ಯದರ್ಶಿ ನಾಗೇಶ್ ಬಲ್ನಾಡ್, ಉಪಾಧ್ಯಕ್ಷೆ ಚಂದ್ರಕಲಾ ಮುಕ್ವೆ, ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಜತೆ ಕಾರ್ಯದರ್ಶಿ ಚಿದಾನಂದ ಸುವರ್ಣ, ನಾರಾಯಣ ಗುರು ಮಂದಿರದ ಕಾರ್ಯ ನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಮತ್ತಿತರರು ಉಪಸ್ಥಿತರಿದ್ದರು.