ಕಲ್ಪವೃಕ್ಷ ಯೋಜನೆಯ ನೀಲನಕಾಶೆ, ಷೇರು ಬಾಂಡ್ ಬಿಡುಗಡೆ

ಮಂಗಳೂರು: ತೆಂಗಿನಿಂದ ಸಿಗುವ ಸೀಯಾಳದಿಂದ ಹಿಡಿದು ಗೆರಟೆ, ಚಿಪ್ಪಿನ ವರೆಗೂ ಅನೇಕ ಬಗೆಯ ಕಚ್ಚಾ ವಸ್ತುಗಳನ್ನು ವಿವಿಧ ಮಾದರಿಯ ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿಸಿ ಹೊಸ ಮಾರುಕಟ್ಟೆ ಸಾಧ್ಯತೆಗಳನ್ನು ತೆರೆದಿಟ್ಟಿರುವ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿ. ಸಂಸ್ಥೆಯ ಬಹುನಿರೀಕ್ಷಿತ ಕಲ್ಪವೃಕ್ಷ ಯೋಜನೆಯ ಉತ್ಪಾದನಾ ಘಟಕಗಳ ನೀಲನಕಾಶೆ ಹಾಗೂ ಕಲ್ಪವೃಕ್ಷ ಷೇರು ಪ್ರಮಾಣ ಪತ್ರವನ್ನು ತುಮಕೂರಿನ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಆದಿಚುಂಚನಗಿರಿ ಮಠದಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಕನ್ನಡ ತೆಂಗು ಬೆಳೆಗಾರರ ಸಂಸ್ಥೆಯ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, ತೆಂಗಿನಿಂದ ತಯಾರಾಗುವ ವಿವಿಧ ಬಗೆಯ ಉತ್ಪನ್ನಗಳು ಹಾಗೂ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನೂ ಸ್ವಾಮೀಜಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಮೂಲಕ ತಯಾರಾಗುತ್ತಿರುವ ವಿವಿಧ ಪ್ರಕಾರದ ಆಹಾರೋತ್ಪನ್ನಗಳು, ಕರಕುಶಲ ವಸ್ತುಗಳನ್ನು ಪರಿಶೀಲಿಸಿದರಲ್ಲದೆ, ಅತ್ಯಂತ ಪರಿಶುದ್ಧ ರೀತಿಯಲ್ಲಿ ಸಿದ್ಧಗೊಳ್ಳುವ ತೆಂಗಿನ ಎಣ್ಣೆಯನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪನಿಯು 300 ಕೋಟಿ ರೂ. ವೆಚ್ಚದಲ್ಲಿ ವಿಸ್ತ್ರತ ಯೋಜನೆ ಕೈಗೆತ್ತಿಕೊಂಡಿದ್ದು ಕಲ್ಪವೃಕ್ಷ ಯೋಜನೆಯ ಅನುಷ್ಠಾನಕ್ಕೆ 50 ಕೋಟಿ ರೂ. ಮೌಲ್ಯದ ಈಕ್ವಿಟಿ ಷೇರು ಸಂಗ್ರಹದ ಗುರಿಯನ್ನು ಇಟ್ಟುಕೊಂಡಿದೆ. ಪ್ರತೀ ಷೇರಿನ ಮೌಲ್ಯವು 1000 ರೂ. ಇದ್ದು, ಕನಿಷ್ಠ 5 ಷೇರು ಹಾಗೂ ಗರಿಷ್ಠ 200 ಷೇರು ಖರೀದಿಸಿ ಕಂಪನಿಯಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ ಎಂದು ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ. ಅವರು ಸ್ವಾಮೀಜಿಗಳಿಗೆ ಮಾಹಿತಿ ನೀಡಿದರು.

ಸಂಸ್ಥೆಯಲ್ಲಿ ಕೃಷಿ ಸಾಧಕರು, ಹೆಸರಾಂತ ಆರ್ಥಿಕ ತಜ್ಞರು, ಸಹಕಾರಿ ಪ್ರಮುಖರು, ಅಂತರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕರನ್ನು ಒಳಗೊಂಡ 16 ಜನರ ಸಮರ್ಥ ಆಡಳಿತ ಮಂಡಳಿಯಿದ್ದು 11 ಶಾಖೆಗಳನ್ನು ಹೊಂದಿದೆ. ಸಂಸ್ಥೆಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಸ್ವಾಮೀಜಿ, ಈ ಸಂಸ್ಥೆಯು ರೈತರ ಆಶಯಕ್ಕೆ ತಕ್ಕಂತೆ ಬೆಳೆಯಲಿ ಹಾಗೂ ಯೋಜನೆಗಳು ಶೀಘ್ರದಲ್ಲಿ ಗುರಿ ಮುಟ್ಟಲಿ ಎಂದು ಹಾರೈಸಿದರು.

ಆನ್ಲೈನ್ ಮೂಲಕ ಷೇರು ಖರೀದಿ ಅವಕಾಶ

ದಕ್ಷಿಣ ಕನ್ನಡ ತೆಂಗು ರೈತರ ಉತ್ಪಾದಕರ ಸಂಸ್ಥೆಯ ವೆಬ್ ಸೈಟ್ ಮೂಲಕ ಆನ್ಲೈನ್ ನಲ್ಲಿ ಗ್ರಾಹಕರು ನೇರವಾಗಿ ಷೇರು ಖರೀದಿಸಲು ಅವಕಾಶವಿದೆ‌. https://coconutfarmers.in/investment/ ಇದು ವೆಬ್ ಲಿಂಕ್ ಆಗಿದ್ದು ನೇರವಾಗಿ ಅಲ್ಲಿರುವ ರಿಜಿಸ್ಟ್ರೇಶನ್ ಫಾರ್ಮ್ ತುಂಬುವ ಮೂಲಕ ಷೇರು ಬಾಂಡ್ ಖರೀದಿಸಬಹುದು. ಷೇರು ಖರೀದಿಸುವ ಗ್ರಾಹಕರು ಬಾಂಡ್ ಮೊತ್ತಕ್ಕೆ ಅನುಸಾರ ಬಾಂಡ್ ಪ್ರತಿಯನ್ನೂ ಪಡೆಯಬಹುದು. ನಿಗದಿತ ಅವಧಿಗೆ ಮಾತ್ರ ಈಕ್ವಿಟಿ ಷೇರು ಖರೀದಿಗೆ ಅವಕಾಶವಿದ್ದು ಗ್ರಾಹಕರು ಕಂಪನಿಯಲ್ಲಿ ಹೂಡಿಕೆ ಮಾಡಿ ಲಾಭಾಂಶ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಟೋಲ್ ಫೀ ಸಂಖ್ಯೆ 18002030129 ಗೆ ಕರೆ ಮಾಡಬಹುದು. ಅಥವಾ 8105487763 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಹೂಡಿಕೆ ಸಂಬಂಧಿಸಿ ಮಾಹಿತಿ ಪಡೆಯಬಹುದು.

Related Posts

Leave a Reply

Your email address will not be published.