ಉರ್ವ ಶ್ರೀ ಮಹಾಗಣಪತಿ ದೇವಳದಲ್ಲಿ ಬ್ರಹ್ಮಕಲಶೋತ್ಸವ
ನಗರದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ.11ರಿಂದ 18ರವರೆಗೆ ಭಾರೀ ವಿಜೃಂಭಣೆಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದ್ದು ಅದರ ಪೂರ್ವಸಿದ್ಧತೆಯ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಮಹಾನಗರ ಪಾಲಿಕೆ, ಆರೋಗ್ಯ, ಪೊಲೀಸ್ ಹಾಗೂ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದರು.
ಈ ಬಾರಿ ಬ್ರಹ್ಮಕಲಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸಲಿದ್ದಾರೆ. ಅದರಲ್ಲೂ ವಿಶೇಷವಾಗಿ ನಡೆಯಲಿರುವ ನೂತನ ಬ್ರಹ್ಮರಥದ ರಥೋತ್ಸವಕ್ಕೆ ಯಾವುದೇ ತೊಂದರೆಯಾಗದಂತೆ ಈಗಾಗಲೇ ಇಲ್ಲಿನ ವಿದ್ಯುತ್ ಕೇಬಲ್ ಗಳನ್ನು ತಾತ್ಕಾಲಿಕವಾಗಿ ಅಂಡರ್ ಗ್ರೌಂಡ್ ನಲ್ಲಿ ಅಳವಡಿಸಲಾಗಿದ್ದು ಇನ್ನುಳಿದಂತೆ ಸ್ವಚ್ಛತೆ, ನೀರಿನ ವ್ಯವಸ್ಥೆ, ಪಾರ್ಕಿಂಗ್, ಭದ್ರತೆ, ಟ್ರಾಫಿಕ್ ನಿರ್ವಹಣೆ, ವಿದ್ಯುತ್ ನಿರ್ವಹಣೆ ಸೇರಿದಂತೆ ಯಾವುದೇ ವಿಷಯದಲ್ಲಿಯೂ ಲೋಪವಾಗದಂತೆ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮ.ನ.ಪಾ ಸದಸ್ಯರಾದ ಗಣೇಶ್ ಕುಲಾಲ್, ಜಯಲಕ್ಷ್ಮಿ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಶ್ರೀ ಮುಡಾರೆ ಸತೀಶ್ ಆಳ್ವ, ಕಾರ್ಯದರ್ಶಿ ಶ್ರೀಕಾಂತ್ ರಾವ್, ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಸುರೇಂದ್ರ ರಾವ್, ಜೊತೆ ಕಾರ್ಯದರ್ಶಿ ಗುರು ಪ್ರಸಾದ್ ರಾವ್, ಸದಸ್ಯರಾದ ರಾಜಗೋಪಾಲ್ ಶೆಟ್ಟಿ, ಕುಶಾಲಪ್ಪ ಗೌಡ, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸಚಿನ್ ರೈ, ಪ್ರಮುಖರಾದ ರಾಜಗೋಪಾಲ್ ರೈ, ಅಣ್ಣಪ್ಪ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.