ವಲಸೆ ಮೂಲ ಕಷ್ಟ ಕಷ್ಟ
2019ರ ಲೋಕ ಸಭಾ ಚುನಾವಣೆ ಬಳಿಕದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು 2024ರ ಲೋಕ ಸಭಾ ಚುನಾವಣೆಯ ಹೊತ್ತಿನಲ್ಲಿ ಜಾರಿ ಎಂದು ಪ್ರಕಟಿಸಿರುವ ಒಕ್ಕೂಟ ಸರಕಾರದ ಉದ್ದೇಶ ಸ್ಪಷ್ಟ. ನಾನು ಮಾತ್ರ ಹಿಂದೂಗಳ ಚಾಂಪಿಯನ್ ಮತ್ತು ಮುಸ್ಲಿಂ ವಿರೋಧಿ ಎಂದು ಬಿಂಬಿಸುವುದು. ಆಮೂಲಕ ಮತ ಒಗ್ಗೂಡಿಸುವ ಉದ್ದೇಶ ಇದರಲ್ಲಿದೆ. ಇದನ್ನು ಹೇಳಲು ಕಾರಣವಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನಗಳಿಂದ ಪೌರತ್ವ ಬಯಸಿ ಬರುವ ಹಿಂದೂ, ಜೈನ, ಬೌದ್ಧ, ಕ್ರಿಶ್ಚಿಯನರಿಗೆ ಪೌರತ್ವ ನೀಡುವುದು. ಆದರೆ ಆ ದೇಶಗಳಿಂದ ಪೌರತ್ವ ಬಯಸಿ ಬರುವ ಮುಸ್ಲಿಮರಿಗೆ ಸಿಎಎ ಪೌರತ್ವ ನೀಡಲು ಅವಕಾಶ ಕೊಡುವುದಿಲ್ಲ.
2019ರಲ್ಲಿ ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ಬಿಜೆಪಿಯು ಅದೇ ಡಿಸೆಂಬರ್‍ನಲ್ಲಿ 1955ರ ಸಿಟಿಜನ್‍ಶಿಪ್ ಕಾಯ್ದೆ ಇಲ್ಲವೇ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದರು. ಆಗಿನ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ಸಂಸದರು ಪ್ರತಿಭಟಿಸಿ ಹೊರ ನಡೆದಿದ್ದ ಸಮಯದಲ್ಲಿ ತರಾತುರಿಯಲ್ಲಿ ಈ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಕಳೆದ ಐದು ವರುಷಗಳಿಂದಲೂ ಲೋಕ ಸಭೆಯಲ್ಲಿ ಬಿಜೆಪಿ ಸರಕಾರವು ಎಲ್ಲ ಮಸೂದೆಗಳನ್ನು ಚರ್ಚೆಗೆ ಅವಕಾಶ ನೀಡದೆ ಪಾಸು ಮಾಡಿಕೊಂಡಿದೆ ಎಂಬುದು ವಿಚಿತ್ರವಾದರೂ ಸತ್ಯ.
ಜಗತ್ತಿನ ಎಲ್ಲ ದೇಶಗಳಲ್ಲಿ ವಲಸೆಗಾರರ ಸಮಸ್ಯೆ ಇದೆ. ಅದು ಮುಖ್ಯವಾಗಿ ಯುದ್ಧ ಕಾರಣದ್ದಾಗಿರುತ್ತದೆ. ಉದ್ಯೋಗ ಬೇಟೆ ಎರಡನೆಯ ಕಾರಣ. ಇತರ ಕಾರಣಗಳು ಅಮುಖ್ಯ. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಈ ರೀತಿ ನುಗ್ಗಿ ಬರುವವರ ಸಂಖ್ಯೆ ಅಪಾರ. ಅವರನ್ನು ತಡೆಯಲ್ಲಿ ಗಡಿಯಲ್ಲಿ ಗೋಡೆ ಇತ್ಯಾದಿ ಇದೆ. ಈಗಾಗಲೇ ಅಮೆರಿಕದಲ್ಲಿ ಕೆಲಸದಲ್ಲಿರುವ ಭಾರತೀಯರನ್ನೇ ಇಟ್ಟುಕೊಳ್ಳಿ. ಅವರ ಮಕ್ಕಳು ಅಲ್ಲೇ ಹುಟ್ಟಿ ಅಲ್ಲಿಯ ಪೌರರೇ ಆಗಿರುತ್ತಾರೆ. ಆದರೆ ಹೆತ್ತವರು ಅಲ್ಲಿನ ಪೌರತ್ವ ಪಡೆಯಲು, ಹಸಿರು ಕಾರ್ಡ್ ಪಡೆಯಲು ಅವರು ಮುದುಕರಾಗುವವರೆಗೆ ಕಾಯಬೇಕು. ಏಕೆಂದರೆ ಮಿತಿಯಲ್ಲಿ ಹಸಿರು ಕಾರ್ಡ್ ನೀಡುವುದಾಗಿದೆ.
ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿಯಲ್ಲಿ ದಾಟುತ್ತ ಮುಳುಗಿ ಸಾಯುವವರ ವರದಿ ಬರುತ್ತಲೇ ಇರುತ್ತದೆ. ಆಫ್ರಿಕಾದ ಬರಪೀಡಿತ ಪ್ರದೇಶದಿಂದ ಇಲ್ಲವೇ ಯುದ್ಧ, ದಂಗೆ ಪೀಡಿತ ಪ್ರದೇಶದಿಂದ ಇವರೆಲ್ಲ ಯೂರೋಪಿನಲ್ಲಿ ಬದುಕು ಅರಸಿ ಹೊರಡುವವರು. ಅವರಿಗೆ ವಿಮಾನದಲ್ಲಿ ಹೋಗಲು ಹಣ ಇರುವುದಿಲ್ಲ; ಅಲ್ಲದೆ ಪ್ರವೇಶವೂ ಸಿಗುವುದಿಲ್ಲ. ಹಾಗಾಗಿ ಚಿಲ್ಲರೆ ಕಾಸಿನೊಡನೆ ಏಜೆಂಟರನ್ನು ನಂಬಿ ಸಾಮಾನ್ಯ ದೊಡ್ಡ ದೋಣಿ ಇಲ್ಲವೇ ಬೋಟುಗಳಲ್ಲಿ ಮೆಡಿಟರೇನಿಯನ್ ಸಮುದ್ರ ದಾಟಿ ಇಟೆಲಿ ಮುಟ್ಟಿ ಯೂರೋಪಿನಲ್ಲಿ ಬದುಕು ಕಾಣಲು ಬಯಸುತ್ತಾರೆ. ಬಹುತೇಕರು ದಾರಿಯಲ್ಲೇ ಕಡಲ ನೀರು ಗೋರಿಯಾಗಿ ಎಲ್ಲ ಕನಸುಗಳನ್ನು ಕೊಂದುಕೊಳ್ಳುತ್ತಾರೆ.
ಆದಿಯಲ್ಲಿ ಮಾನವ ಸಮುದಾಯವೇ ಆಫ್ರಿಕಾದಿಂದ ಹೊರಟು ಒಂದು ಏಶಿಯಾದತ್ತ, ಕವಲಾಗಿ ಮತ್ತೊಂದು ಯೂರೋಪಿನತ್ತ ಸಾಗಿ ವಿಕಾಸ ಪಡೆಯಿತು ಎನ್ನುವುದು ಮಾನವಿಕ ಅಧ್ಯಯನ. ಯೂರೋಪಿನಲ್ಲಿ ಬಡಗಣ ಧ್ರುವದ ಚಳಿಗಾಲದ ಹೆಪ್ಪುಗಟ್ಟಿದ ಮಂಜು ದಾರಿಯಾಗಿ ಜನ ಸಮುದಾಯ ಅಮೆರಿಕ ಖಂಡವನ್ನು ಸೇರಿದೆ. ಆಗ್ನೇಯ ಏಶಿಯಾದ ದಾರಿ ದಾಟಿ ದೋಣಿಗಳಲ್ಲಿ ಸಾಗಿ ಶಾಂತ ಸಾಗರದ ದ್ವೀಪಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‍ಗಳನ್ನೂ ಮುಟ್ಟಿದ್ದಾರೆ. ಅವೆಲ್ಲ ಮೀರಿ ಆಧುನಿಕವಾಗಿಯೂ ಜನರು ಖಂಡದಿಂದ ಖಂಡಕ್ಕೆ, ದೇಶದಿಂದ ದೇಶಕ್ಕೆ ವಲಸೆ ಹೋಗಿದ್ದಾರೆ ಇಲ್ಲವೇ ದಾಳಿ ಮಾಡಿ ಸೇರಿದ್ದಾರೆ. ಅದರಿಂದ ಕೆಲವು ಹಾನಿ, ಕೆಲವು ಒಳಿತುಗಳೂ ಆಗಿವೆ.
ಉದಾಹರಣೆಗೆ ಬ್ರಿಟಿಷರು ಭಾರತವನ್ನು ಆಳುವ ಮೂಲಕ ಎಲ್ಲ ಆಧುನಿಕ ಮುನ್ನಡೆಯನ್ನು ದೇಶ ಕಾಣುವಂತಾಯಿತು. ಪ್ರಜಾಪ್ರಭುತ್ವ ಮತ್ತು ಉದಾರವಾದಿ ತತ್ವಗಳು ಇಲ್ಲಿನ ಉಸಿರಾಯಿತು. ಅದೇ ವೇಳೆ ಭಾರತದ ಸಂಪತ್ತು ಲೂಟಿ ಹೋಯಿತು; ನಮ್ಮ ಜನರ ಮೇಲೆ ದೌರ್ಜನ್ಯಗಳು ನಡೆದವು. ಜಗತ್ತಿನ ಎಲ್ಲ ದೇಶ ಮತ್ತು ಪ್ರದೇಶಗಳು ಹೀಗೆ ದಾಳಿಕೋರರಿಂದ ನಲುಗಿವೆ ಮತ್ತು ಕೆಲವು ಸಾಂಸ್ಕøತಿಕ ಇಲ್ಲವೆ ಮುನ್ನಡೆಯ ಮೌಲ್ಯಗಳನ್ನು ಪಡೆದಿವೆ. ಇತ್ತೀಚಿನ ವರುಷಗಳಲ್ಲಿ ಮ್ಯಾನ್ಮಾರ್‍ನ ಸೇನಾಡಳಿತದ ಕಾರಣಕ್ಕೆ ಅಲ್ಲಿನ ರೊಹಿಂಗ್ಯಾಗಳು ನಿರಾಶ್ರಿತರಾಗಿ ಭಾರತ ಮತ್ತು ನಾನಾ ಕಡೆಗೆ ಬಂದಿದ್ದಾರೆ.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಮೇಲೆದ್ದು ಅಮೆರಿಕ ಬಿಟ್ಟು ಹೋಗಬೇಕಾಗಿ ಬಂದಾಗ ಅಲ್ಲಿಂದ ನಿರಾಶ್ರಿತರು ಇರಾನ್, ಪಾಕಿಸ್ತಾನಗಳಿಗೆ ವಲಸೆಯಾದರು. ಅಲ್ಲಿದ್ದ ಭಾರತೀಯ ವ್ಯಾಪಾರಿಗಳು, ನೌಕರರು ಭಾರತಕ್ಕೆ ವಾಪಾಸಾದರು. ರಶಿಯಾ ಉಕ್ರೇನ್ ಯುದ್ಧ ಸಂಭವಿಸಿದಾಗ ನಿರಾಶ್ರಿತರು ಪಕ್ಕದ ದೇಶಗಳಿಗೆ ಹೋದರು. ಆದರೆ ಉಕ್ರೇನ್‍ನಲ್ಲಿ ಓದುತ್ತಿದ್ದ ಭಾರತದ ವಿದ್ಯಾರ್ಥಿಗಳು ಓದನ್ನು ಅರ್ಧಕ್ಕೇ ಬಿಟ್ಟು ಭಾರತಕ್ಕೆ ಬರಬೇಕಾಯಿತು. ಕೆಲವು ಭಾರತೀಯರ ಸಾವು ಕೂಡ ಆಯಿತು. ಇಸ್ರೇಲ್, ಪ್ಯಾಲೆಸ್ತೀನ್ ಯುದ್ಧದಲ್ಲೂ ಕೆಲವು ಭಾರತೀಯರ ಸಾವು ಸಂಭವಿಸಿದೆ. ವಲಸೆ ವಿರೋಧಿ ಜನರು ಎಲ್ಲ ದೇಶಗಳಲ್ಲಿ, ಎಲ್ಲ ಕಾಲಗಳಲ್ಲೂ ಇದ್ದರು.
ಯೆಹೂದ್ಯರು ತಾವು ವಲಸೆ ಹೋಗಿದ್ದ ಈಜಿಪ್ತ್ ಬಿಟ್ಟು ಜೆರೂಸಲೇಮ್ ಸುತ್ತಣ ಪ್ರದೇಶಕ್ಕೆ ಮತ್ತೆ ವಾಪಾಸಾದುದು ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ ದಾಖಲಾಗಿದೆ. ಜರ್ಮನಿಯಲ್ಲಿ ಹಿಟ್ಲರನು ವಲಸೆ ವಿರೋಧಿ ನೀತಿ ಅನುಸರಿಸಿ, ತಾನು ಆರ್ಯ ಶ್ರೇಷ್ಠ ಎಂದುಕೊಂಡುದು ಎರಡನೆಯ ಮಹಾ ಯುದ್ಧಕ್ಕೆ ಕಾರಣವಾಯಿತು. ಕೊನೆಗೆ ಅಡಾಲ್ಫ್ ಹಿಟ್ಲರ್ ಸೋತು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಯುಎಸ್‍ಎ ಮತ್ತು ಬ್ರಿಟನ್ ನೆರವಿನಿಂದ ಹಿಟ್ಲರ್ ಕಾರಣಕ್ಕೆ ಅಳಿದುಳಿದು ವಲಸೆ ಹೋಗಿದ್ದ ಯಹೂದ್ಯರು ಮತ್ತೆ ಪ್ಯಾಲೆಸ್ತೀನ್‍ನಲ್ಲಿ ತಮ್ಮ ಎರಡು ಸಾವಿರ ವರುಷ ಹಿಂದೆ ಇದ್ದ ಇಸ್ರೇಲ್ ನಾಡು ಕಟ್ಟಿಕೊಂಡರು. ಐದು ಸಾವಿರ ವರುಷಗಳಿಂದಲೂ ಯಹೂದ್ಯ, ಪಿಲಿಸ್ತೀನ್ ಜನರ ತಿಕ್ಕಾಟ ಇತ್ತು; ಈಗಲೂ ಇದೆ.
ಭಾರತದ ಸಿಎಎ ಹೀಗೆ ಒಂದು ಜನಾಂಗೀಯ ಮೇಲ್ಮೆಯ ನಾಜೀ ನಿಲುವಾಗಿದೆ ಎನ್ನುವುದು ಪಬಂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಅಭಿಪ್ರಾಯ. ಅದರಲ್ಲಿನ ಜನಾಂಗೀಯ ತಾರತಮ್ಯ ತೊಲಗುವವರೆಗೂ ನಮ್ಮ ರಾಜ್ಯದಲ್ಲಿ ಸಿಎಎ ಜಾರಿಗೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ. ತಮಿಳುನಾಡಿನ ಎಂ. ಕೆ, ಸ್ಟಾಲಿನ್ ಮತ್ತು ಕೇರಳದ ಪಿಣರಾಯಿ ವಿಜಯನ್ ಸರಕಾರಗಳು ಕೂಡ ಸಿಎಎ ವಿರೋಧಿಸಿವೆ. ಎಎಪಿ ಮೊದಲಾದ ಪಕ್ಷಗಳೂ ಸಿಎಎ ಸಲ್ಲ ಎಂದಿದ್ದಾರೆ. ಕಾಂಗ್ರೆಸ್ ಹಿಂದಿನಿಂದಲೂ ಸಿಎಎ ವಿರೋಧಿಸುತ್ತಲೇ ಬಂದಿದೆ. ಕಾಂಗ್ರೆಸ್ ಓಟ್ ಬ್ಯಾಂಕ್ ಉಳಿಸಿಕೊಳ್ಳಲು ಸಿಎಎ ವಿರೋಧಿಸುತ್ತಿದೆ ಎನ್ನುವುದು ಬಿಜೆಪಿಯವರ ಆರೋಪವಾಗಿದೆ.
ಬರಹ: ಪೇರೂರು ಜಾರು