“ಸರ್ಕಸ್” ತುಳು ಚಿತ್ರ ಸಕ್ಸಸ್ ಮೀಟ್

ಮಂಗಳೂರು: “ಸಿನಿಮಾ ಗೆದ್ದಿರುವುದು ಒಬ್ಬನಿಂದಲ್ಲ. ನನ್ನ ಇಡೀ ತಂಡ ಇದಕ್ಕಾಗಿ ರಾತ್ರಿ ಹಗಲು ಶ್ರಮವಹಿಸಿ ದುಡಿದಿದೆ. ಹೆಚ್ಚಿನವರು ಭಾಷೆಯ ಮೇಲೆ ಪ್ರೀತಿಯಿಟ್ಟು ತುಳು ಸಿನಿಮಾ ಮಾಡುತ್ತಾರೆ, ಆದರೆ ಬಿಡುಗಡೆ ವೇಳೆ ಅವಸರ ಮಾಡುತ್ತಾರೆ. ಇದರಿಂದ ಒಳ್ಳೆಯ ಸಿನಿಮಾಗಳು ಕೂಡ ಸೋಲುತ್ತಿರುವುದು ವಿಷಾದದ ಸಂಗತಿ. ಆದ್ದರಿಂದ ಸಿನಿಮಾ ಬಿಡುಗಡೆ ವೇಳೆ ಪೈಪ್ರೋಟಿ ಬೇಡ”. “ನನ್ನ ಜೀವನದ ಪ್ರತಿಯೊಂದು ಘಟ್ಟದಲ್ಲೂ ಪತ್ರಕರ್ತ ಮಿತ್ರರು ನನ್ನ ಜೊತೆ ನಿಂತು ಪ್ರೋತ್ಸಾಹ ಮಾಡಿರುವ ಕಾರಣ ದೇಶ ವಿದೇಶಗಳಲ್ಲಿ ಸರ್ಕಸ್ ಸಿನಿಮಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ ಎಂದು ಸರ್ಕಸ್ ಚಿತ್ರ ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದರು.

ಅವರು ತಮ್ಮ ನಿರ್ದೇಶನ ಮತ್ತು ಅಭಿನಯದ “ಸರ್ಕಸ್” ತುಳು ಸಿನಿಮಾ ಜೂನ್ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸನ್ನು ಗಳಿಸಿರುವ ಹಿನ್ನೆಲೆಯಲ್ಲಿ ಕರೆದಿದ್ದ ಸಕ್ಸಸ್ ಮೀಟ್ ನಲ್ಲಿ ಮಾತಾಡುತ್ತಿದ್ದರು.

ಬಳಿಕ ಮಾತಾಡಿದ ಭೋಜರಾಜ್ ವಾಮಂಜೂರು ಅವರು, “ಸರ್ಕಸ್ ಚಿತ್ರದ ಬಗ್ಗೆ ಮಾತಾಡಲು ಹೆಮ್ಮೆ ಎನಿಸುತ್ತಿದೆ. ಯಾಕೆಂದರೆ ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿಯೂ ಸಿನಿಮಾ ಹೆಸರು ಮಾಡುತ್ತಿದೆ. ಸಿನಿಮಾ ಗೆಲ್ಲಲು ಮಾಧ್ಯಮ ಮಿತ್ರರ ಸಹಕಾರ ತುಂಬಾ ಅಗತ್ಯ. ಅದೇ ರೀತಿ ಸರ್ವಧರ್ಮದ ಪ್ರೇಕ್ಷಕರ ಪ್ರೀತಿಯಿಂದ ಸಿನಿಮಾ ಗೆದ್ದಿದೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರೂಪೇಶ್ ಶೆಟ್ಟಿ ಟೀಮ್ ಮಾಡಿರುವ ನಿರಂತರ ಪ್ರಯತ್ನದ ಫಲವಾಗಿ ಸಿನಿಮಾ ಒಳ್ಳೆಯ ಹೆಸರು ಪಡೆದಿದೆ. ಇದೇ ರೀತಿ ಮುಂದೆ ಬರಲಿರುವ ಎಲ್ಲ ತುಳುಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ” ಎಂದರು.

ಚಿತ್ರಕ್ಕೆ ಸಂಭಾಷಣೆ ಬರೆದಿರುವ ಪ್ರಸನ್ನ ಶೆಟ್ಟಿ ಬೈಲೂರು ಅವರು ಮಾತಾಡಿ, “ಬಲೇ ತೆಲಿಪಾಲೆ ಮೂಲಕ ಬೆಳಕಿಗೆ ಬಂದ ಸಣ್ಣ ಕಲಾವಿದ ನಾನು. ನನ್ನನ್ನು ಗುರುತಿಸಿ ಚಿತ್ರದಲ್ಲಿ ಸಂಭಾಷಣೆ ಬರೆಯಲು ಅವಕಾಶ ಮಾಡಿಕೊಟ್ಟಿರುವ ರೂಪೇಶ್ ಶೆಟ್ಟಿ ಅವರಿಗೆ ನಾನು ಧನ್ಯವಾದವನ್ನು ಅರ್ಪಿಸುತ್ತೇನೆ. ಮಂಗಳೂರು ಮಾತ್ರವಲ್ಲದೆ ಬೆಂಗಳೂರಿನ ಕನ್ನಡಿಗರು ಕೂಡ ಚಿತ್ರದ ಹಾಸ್ಯ ದೃಶ್ಯಗಳಿಗೆ ನಗುತ್ತಿದ್ದಾರೆ. ಭಾಷೆ ಅರ್ಥವಾಗದೆ ಇದ್ದರೂ ಕಲಾವಿದರ ನಟನೆ ಜನರನ್ನು ಮುಟ್ಟಿದೆ ಎಂದರೆ ಅದಕ್ಕೆ ರೂಪೇಶ್ ಶೆಟ್ಟಿ ಅವರ ದಕ್ಷ ನಿರ್ದೇಶನ ಕಾರಣ” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಟಿ ರಚನಾ ರೈ, ಭೋಜರಾಜ್ ವಾಮಂಜೂರ್, ಪಂಚಮಿ ವಾಮಂಜೂರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ನವೀನ್ ಶೆಟ್ಟಿ, ನಿರ್ಮಾಪಕ ಮಂಜುನಾಥ್ ಅತ್ತಾವರ, ಸಂಗೀತ ನಿರ್ದೇಶಕ ಲಾಯ್ ವೇಲೆಂಟೈನ್ ಡಿಸೋಜ, ಚಿತ್ರ ವಿತರಣೆಕಾರ ಸಚಿನ್ ಎ.ಎಸ್. ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಸರ್ಕಸ್ ಇಲ್ಲಿಯವರೆಗೆ 14 ದೇಶಗಳು ಸೇರಿ ಒಟ್ಟು 130 ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ. ಇದರ ಜತೆ ಏಕಕಾಲದಲ್ಲಿ ದೇಶದಾದ್ಯಂತ ಬಿಡುಗಡೆಯಾದ ಮೊದಲ ತುಳು ‘ಪ್ಯಾನ್ ಇಂಡಿಯಾ’ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

Related Posts

Leave a Reply

Your email address will not be published.