ಮಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಸಹಿಸಂಗ್ರಹ ಚಳುವಳಿ
ಮಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು,ಜನಪರ ಪರ್ಯಾಯ ನೀತಿಗಳನ್ನು ಜಾರಿಗೊಳಿಸಬೇಕು ಹಾಗೂ ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ದೇಶಾದ್ಯಂತ ವ್ಯಾಪಕ ಪ್ರಚಾರಾಂದೋಲನ ನಡೆಸಬೇಕೆಂಬ CITU ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ಸ್ವಾಮಿ ವಿವೇಕಾನಂದ ಜಯಂತಿ ದಿನವಾದ ಇಂದು ದೇಶಾದ್ಯಂತ ಸಹಿಸಂಗ್ರಹ ಚಳುವಳಿಗೆ ಚಾಲನೆ ನೀಡಲಾಯಿತು.ದ.ಕ.ಜಿಲ್ಲೆಯ ಮಂಗಳೂರು, ತೊಕ್ಕೋಟು, ಗುರುಪುರ ಕೈಕಂಬ, ಬೆಳ್ತಂಗಡಿಗಳಲ್ಲಿ ಸಹಿಸಂಗ್ರಹ ಚಳುವಳಿಯನ್ನು ಉದ್ಘಾಟಿಸಲಾಯಿತು.
ಮಂಗಳೂರು ನಗರದಲ್ಲಿ ಸಹಿಸಂಗ್ರಹ ಚಳುವಳಿಯನ್ನು ಉದ್ಘಾಟಿಸಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಕೇಂದ್ರದ ನರೇಂದ್ರ ಮೋದಿ ಸರಕಾರವು ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟವಾಗಿದ್ದು ತನ್ನ ಜನವಿರೋಧಿ ನೀತಿಗಳಿಂದ ದುಡಿಯುವ ವರ್ಗದ ಹಾಗೂ ಜನಸಾಮಾನ್ಯರ ಬದುಕನ್ನು ಸರ್ವನಾಶಗೊಳಿಸಿದೆ. ನೀತಿಗಳನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ಸರಕಾರವನ್ನೇ ಬದಲಾಯಿಸಿ ಜನಪರ ಪರ್ಯಾಯ ನೀತಿಗಳನ್ನು ಜಾರಿಗೊಳಿಸುವಲ್ಲಿ ದೇಶದ ಕಾರ್ಮಿಕ ವರ್ಗ ಒಂದಾಗಿ ಮುನ್ನಡೆಯಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಮಹಮ್ಮದ್ ಮುಸ್ತಾಫ, ಕಾರ್ಮಿಕ ಮುಖಂಡರಾದ ರಿಯಾಜ್, ಗುಡ್ಡಪ್ಪ, ಮುಂತಾದವರು ಉಪಸ್ಥಿತರಿದ್ದರು.
ತೊಕ್ಕೋಟುನಲ್ಲಿ ಜರುಗಿದ ಸಹಿಸಂಗ್ರಹ ಚಳುವಳಿಯನ್ನು CITU ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿ,ಗುರುಪುರ ಕೈಕಂಬದಲ್ಲಿ ರೈತ ನಾಯಕರಾದ ಸದಾಶಿವದಾಸ್, ಬೆಳ್ತಂಗಡಿಯಲ್ಲಿ CITU ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಂ.ಭಟ್ ರವರು ಉದ್ಘಾಟಿಸುತ್ತಾ, ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, ವಿವಿಧ ವಿಭಾಗದ ಕಾರ್ಮಿಕರ ಸಂಕಷ್ಟಗಳನ್ನು ಎಳೆಎಳೆಯಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ತೊಕ್ಕೋಟು ನಲ್ಲಿ CITU ಜಿಲ್ಲಾ ನಾಯಕರಾದ ಜಯಂತ ನಾಯಕ್, ಸುಂದರ ಕುಂಪಲ, ರೋಹಿದಾಸ್,ಪದ್ಮಾವತಿ ಶೆಟ್ಟಿ, ಜನಾರ್ದನ ಕುತ್ತಾರ್ ಚಂದ್ರಹಾಸ ಪಿಲಾರ್, ಕೈಕಂಬದಲ್ಲಿ CITU ಜಿಲ್ಲಾ ನಾಯಕರಾದ ನೋಣಯ್ಯ ಗೌಡ, ವಸಂತಿ ಕುಪ್ಪೆಪದವು, ವಾರಿಜಾ,ಕುಸುಮಾ, ಬೆಳ್ತಂಗಡಿಯಲ್ಲಿ CITU ತಾಲೂಕು ಮುಖಂಡರಾದ ಜಯರಾಮ ಮಯ್ಯ,ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.