ತಿದ್ದುಪಡಿಗಳು ಪೂರಕವಿರಬೇಕು, ಕೊರೆಯುವುದಲ್ಲ

ಭಾರತದ ನಾಗರಿಕರಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತಾ ದೃಢ ಮನಸ್ಸಿನಿಂದ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲ ನಾಗರಿಕರಿಗೆ ಈ ಕೆಳಗಿನ ಹಕ್ಕುಗಳನ್ನು ಕಾತರಿಪಡಿಸಲಾಗುತ್ತದೆ.
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ.


ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ.ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ಮತ್ತು ಅದನ್ನು ಎಲ್ಲರಿಗೂ ಹಂಚುವುದು.ಇವುಗಳನ್ನು ದೊರಕಿಸಿ,ವೈಯಕ್ತಿಕ ಘನತೆ ಮತ್ತು ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಎಲ್ಲರಲ್ಲೂ ಸಹೋದರತ್ವವನ್ನು ಪ್ರೋತ್ಸಾಹಿಸಲು ನಿಶ್ಚಯಿಸಿ,ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಈ 1949ರ ನವೆಂಬರ್ ತಿಂಗಳ 26ನೆಯ ದಿನದಂದು ನಾವಾಗಿ ನಾವೇ ಈ ಸಂವಿಧಾನವನ್ನು ಅಳವಡಿಸಿಕೊಂಡು, ಜಾರಿಗೊಳಿಸಿ, ನಾವಾಗಿಯೇ ವಿಧಿಸಿಕೊಳ್ಳುತ್ತೇವೆ.ಇದು ಭಾರತೀಯ ಸಂವಿಧಾನದ ಪ್ರಿಯಾಂಬಲ್ ಇಲ್ಲವೇ ಪೀಠಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇದನ್ನು ಓದುವುದರ ಮೂಲಕ ನಮ್ಮ ಸಂವಿಧಾನದ ಮಹತ್ವವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನ ನಡೆದಿದೆ.
ಈ ಪೀಠಿಕೆಯಲ್ಲಿನ ಸೆಕ್ಯೂಲರ್ ಮತ್ತು ಸೋಶಿಯಲಿಸ್ಟ್ ಎಂಬ ಶಬ್ದಗಳನ್ನು 1976ರಲ್ಲಿ ಇಂದಿರಾ ಗಾಂಧಿಯವರು

ಸಂವಿಧಾನದ ಪೀಠಿಕೆಗೆ ಸೇರಿಸಿದ್ದಾರೆ. ಸಂವಿಧಾನದಲ್ಲಿ ಅದನ್ನು ಅಗತ್ಯ ಬಿದ್ದಾಗ ತಿದ್ದಲು ಅವಕಾಶ ಮಾಡಿ ಕೊಡಲಾಗಿದೆ.
ಇಂದಿರಾ ಗಾಂಧಿಯವರು ಸೇರಿಸಿದ ಶಬ್ದಗಳು ಸಂವಿಧಾನಕ್ಕೆ ವಿಶಾಲಾರ್ಥವನ್ನು ನೀಡಿದರೆ. ಬಿಜೆಪಿಯ ಪೌರತ್ವ ಮೊದಲಾದ ತಿದ್ದುಪಡಿಗಳು ಸಂವಿಧಾನದ ಮೂಲ ತತ್ವಗಳಿಗೇ ಎಳ್ಳು ನೀರು ಬಿಡುವ ಮಾದರಿ ಇವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಂವಿಧಾನದ ಬಗೆಗೆ ಇತ್ತೀಚೆಗೆ ತುಂಬ ಚರ್ಚೆ ಆಗುತ್ತಿದೆ. ಸಕಾರಾತ್ಮಕವಾಗಿ ಅಲ್ಲ; ನಕಾರಾತ್ಮಕವಾಗಿ. ಅದಕ್ಕೆ ಮುಖ್ಯ ಕಾರಣ ಸಂವಿಧಾನ ಎಂಬ ಶಬ್ದದ ಹೊರತಾಗಿ ಅದರಲ್ಲಿ ಏನಿದೆ, ಅದು ಹೇಗೆ ಜಾರಿಗೆ ಬಂತು ಎಂಬುದರ ಅರಿವು ಬಹುತೇಕರಿಗೆ ಇಲ್ಲದಿರುವುದು.


1946ರ ಡಿಸೆಂಬರ್‍ನಲ್ಲಿ ಕಾನ್‍ಸ್ಟಿಯೆಂಟ್ ಎಸೆಂಬ್ಲಿ ಆಫ್ ಇಂಡಿಯಾವು ಎಂಟು ಮುಖ್ಯ ಸೇರಿ ಒಟ್ಟು 22 ಸಮಿತಿಗಳನ್ನು ರಚಿಸಿತು. ಆ ಎಂಟರಲ್ಲಿ ಸಂವಿಧಾನ ಸಮಿತಿ ಕೂಡ ಒಂದಾಗಿದೆ. ಆದರೆ ಅದು ತನ್ನ ಕರ್ತವ್ಯ ನಿಬಾಯಿಸುವಲ್ಲಿ ವಿಫಲವಾಯಿತು. 1947ರ ಆಗಸ್ಟ್‍ನಲ್ಲಿ ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಸಂವಿಧಾನ ಕರಡು ಸಮಿತಿ ರಚಿಸಲಾಯಿತು. ಮೊದಲ ಸಮಿತಿಯನ್ನು ಅನುಷ್ಠಾನ ಸಮಿತಿ ಎನ್ನಲಾಯಿತು. ಅಂಬೇಡ್ಕರ್ ಅಧ್ಯಕ್ಷತೆಯ ಸಮಿತಿಯನ್ನು ಮಹಾತ್ಮಾ ಗಾಂಧೀಜಿಯವರ ಸಲಹೆಯ ಮೇರೆಗೆ ಪ್ರಧಾನಿ ನೆಹರು ರಚಿಸಿದ್ದರು.


ಮುಂದೆ ಪ್ರತಿ ಪಕ್ಷದಲ್ಲಿ ಇದ್ದ ಅಂಬೇಡ್ಕರ್‍ರನ್ನು ಕಾನೂನು ಮಂತ್ರಿ ಮಾಡಿದ ಕಾಂಗ್ರೆಸ್ ಸರಕಾರವು ಸಂವಿಧಾನ ಓದುವ ಮತ್ತು ಅಂಗೀಕಾರದ ಜವಾಬುದಾರಿಯನ್ನು ಸಹ ಅವರಿಗೆ ವಹಿಸಿತು. ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ ಆದ ಒಪ್ಪಂದದಂತೆ ದಲಿತರಿಗೆ ಮೀಸಲಾತಿ ನೀಡಲು ಸಾಧ್ಯವಾಯಿತಾದರೂ ಅತಿ ಹಿಂದುಳಿದ ಜಾತಿಗಳವರಿಗೆ ಮೀಸಲಾತಿ ನೀಡಲು ಸಾಧ್ಯವಾಗಲಿಲ್ಲ. ಮಹಿಳೆಯರಿಗೆ ಆಸ್ತಿ ಹಕ್ಕು ವಿಷಯದಲ್ಲೂ ಅಂಬೇಡ್ಕರ್ ನೀಡಿದ್ದನ್ನು ಕಾನ್‍ಸ್ಟಿಯೆಂಟ್ ಎಸೆಂಬ್ಲಿ ಆಫ್ ಇಂಡಿಯಾ ಒಪ್ಪಲಿಲ್ಲ.

ಇವುಗಳೆಲ್ಲ ಆಗದಿರಲು ಆಗ ಅದರಲ್ಲಿ ಮೇಲು ಜಾತಿಯ ಕರ್ಮಠರೇ ಹೆಚ್ಚು ತುಂಬಿದ್ದುದು ಮುಖ್ಯ ಕಾರಣವಾಗಿತ್ತು.
ಇತ್ತೀಚೆಗೆ ಪ್ರಧಾನಿ ಮೋದಿಯವರು ರಾಜಸ್ತಾನದಲ್ಲಿ ಚುನಾವಣಾ ಪ್ರಚಾರ ಮಾಡುತ್ತ ಭಾರತದ ಸಂವಿದಾನ ನಮಗೆ ಪೂಜನೀಯ. ಅಂಬೇಡ್ಕರ್‍ರೇ ಹುಟ್ಟಿ ಬಂದರೂ ಅದನ್ನು ರದ್ದು ಮಾಡುವುದು ಸಾಧ್ಯವಿಲ್ಲ ಎಂದರು. ಮರುದಿನವೇ ಉತ್ತರ ಪ್ರದೇಶದ ಸಂಸದ ಲಲ್ಲು ಸಿಂಗ್ ಅವರು ನಮಗೆ ಸಂವಿಧಾನ ಬದಲಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ಎಂದರು. ಇದು ಒಂದು ರೀತಿಯ ಕಣ್ಣಾಮುಚ್ಚಾಲೆ ಆಟದಂತಿದೆ.
ಸಂವಿಧಾನವು ವಿವಾದವಾಗಬಾರದು. ಅದರ ತಿದುಪಡಿ ಮೂಲ ಆಶಯಕ್ಕೆ ವಿರುದ್ಧವಾಗಿರಬಾರದು, ಆದರೆ ಈಗ ಹಾಗೆ ಆಗುತ್ತದೆಯೇ ಎಂದರೆ ಇಲ್ಲ. ಕೆಲವರಂತೂ ಇಂದಿರಾಗಾಂಧಿಯವರು ಸೇರಿಸಿದ ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಪದಗಳನ್ನು ಮೊದಲು ತೆಗೆಯಲು ತುದಿಗಾಲಲ್ಲಿ ನಿಂತಿದ್ದಾರೆ.


ಪೀಠಿಕೆಯನ್ನು ಸರಿಯಾಗಿ ನೋಡಿದರೆ ಭಾರತವು ಸಂವಿಧಾನದಂತೆ ನಡೆದಿಲ್ಲ ಎನ್ನುವುದು ಸ್ಪಷ್ಟವಾಗುತ್ತಲಿದೆ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ ಈಗ ಇದೆ ಎಂದು ನಿಮಗೆ ಅನಿಸುತ್ತಿದೆಯೇ? ಹಿಂದೂ, ಸನಾತನ ಎಂಬ ಶಬ್ದಗಳು ಈ ಮೇಲಿನ ಐದೂ ಶಬ್ದಗಳನ್ನು ತೊಡೆದು ಹಾಕುವ ಮಟ್ಟಿಗೆ ಹುಯಿಲುಗಳಾಗಿವೆ.


ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಎಲ್ಲಿದೆ? ಈಗಲಂತೂ ಕೆಲವರೇ ಅತಿ ಸಿರಿವಂತರಾಗುತ್ತಿದ್ದಾರೆ. ಸಾಮಾಜಿಕವಾಗಿ ಅತಿ ಹಿಂದುಳಿದವರಿಗೆ ಉದ್ಯೋಗಾವಕಾಶದಿಂದ ಹಿಡಿದು ಅಧಿಕಾರ ಸ್ಥಾನಮಾನದವರೆಗೆ ಅವಕಾಶ ತುಸುವೇ ಸಿಗುತ್ತಿದೆ. ಅರ್ಧಕ್ಕರ್ಧ ಮತದಾರರು ಮಹಿಳೆಯರಾದರೂ ರಾಜಕೀಯವಾಗಿ ಮಹಿಳೆಯರಿಗೆ 15 ಶೇಕಡಾದಷ್ಟು ಮಾತ್ರ ಅವಕಾಶ ಸಿಗುತ್ತಿದೆ. ಇತರ ತುಳಿತಕ್ಕೊಳಗಾದವರ ಗತಿಯೂ ಅದೇ ಆಗಿದೆ.


ಸ್ಥಾನಮಾನ, ಸಮಾನ ಅವಕಾಶ, ಸಹೋದರತ್ವ ಗುಡ್ಡ ಹತ್ತಿದೆ. ಸಂವಿಧಾನವನ್ನು ಪೂಜಿಸಬೇಕಾದ ಅಗತ್ಯವಿಲ್ಲ. ಅದನ್ನು ಗೌರವಿಸಬೇಕಾಗಿದೆ. ಅದನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅಂಬೇಡ್ಕರ್ ದಿನ, ಸಂವಿಧಾನ ದಿನ ಇವೆಲ್ಲ ಕಾಟಾಚಾರಕ್ಕೆ ನಡೆದರೆ ಪ್ರಯೋಜನವಿಲ್ಲ. ಯಾವುದೇ ಬಗೆಯ ಗೌರವವಿದ್ದರೂ ಅದು ಹೃದಯದಿಂದ ಬರಬೇಕು.

ಬರಹ: ಪೇರೂರು ಜಾರು, ಹಿರಿಯ ಸಂಪಾದಕರು
,,,,,,,,,,,,,,,,,,,,,,,,,,,,,,,,,,,,,

Related Posts

Leave a Reply

Your email address will not be published.