ಶಾಸಕರ ಮಾನಹಾನಿ ಪ್ರಕರಣ ಸಮಗ್ರ ತನಿಖೆಯಾಗಲಿ – CPIM ಒತ್ತಾಯ
ಶಾಸಕ ವೇದವ್ಯಾಸ ಕಾಮತ್ ರವರು ತನ್ನ ಮಾನಹಾನಿಕರ ಸುದ್ದಿ ಪ್ರಕಟವಾಗದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಸಮಗ್ರ ತನಖೆಯಾಗಬೇಕು.ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬರು ಮಾನಹಾನಿ ಆಗುವಂತಹ ವಿಚಾರದ ಬಗ್ಗೆ ಕನಿಷ್ಟ ದೂರನ್ನು ಕೊಡದೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಶಾಸಕರ ಸಚ್ಚಾರಿತ್ಯದ ಬಗ್ಗೆ ಸಾರ್ವಜನಿಕರಿಗೆ ಅನುಮಾನಗಳು ವ್ಯಕ್ತವಾಗುತ್ತಿದ್ದು,ಈ ಬಗ್ಗೆ ಕೂಡಲೇ ಶಾಸಕ ವೇದವ್ಯಾಸ ಕಾಮತರು ಸ್ಪಷ್ಟನೆ ನೀಡಬೇಕು ಎಂದು CPIM ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಖಾರವಾಗಿ ಪ್ರತಿಕ್ರಿಯಿಸಿದರು.
ಅವರು ಉರ್ವಾಸ್ಟೋರ್ ಸುಂಕದಕಟ್ಟೆಯಲ್ಲಿ ಜರುಗಿದ ವಿವಿಧ ವಿಭಾಗದ ಕಾರ್ಮಿಕರ ಸಮಾವೇಶದಲ್ಲಿ ಭಾಗವಹಿಸುತ್ತಾ ಈ ಮಾತುಗಳನ್ನು ಹೇಳಿದರು.
ಹಿರಿಯ ಕಾರ್ಮಿಕ ಮುಖಂಡರಾದ ಮನೋಜ್ ಉರ್ವಾಸ್ಟೋರ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅವರು ಮುಂದುವರಿಸುತ್ತಾ, ಬಿಜೆಪಿಯ ಅನೇಕ ಶಾಸಕರು ಈ ರೀತಿಯಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವ ಮೂಲಕ ಜನರ ನಂಬಿಕೆ ವಿಶ್ವಾಸಕ್ಕೆ ದಕ್ಕೆ ತರುತ್ತಿದ್ದಾರೆ.ಹಾಗಾದರೆ ಈ ಬಗ್ಗೆ ಬಿಜೆಪಿಯನ್ನು ನಿಯಂತ್ರಿಸುವ RSS ನ ನಿಲುವೇನು ಎಂದು ಪ್ರಶ್ನಿಸಿರುವ ಅವರು,ಜನರ ಬದುಕನ್ನು ರೂಪಿಸುವ ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸಿ ಜಾತಿ ಧರ್ಮದ ಹೆಸರಿನಲ್ಲಿ ಜನತೆಯ ಧಾರ್ಮಿಕ ನಂಬಿಕೆಗಳನ್ನು ದುರುಪಯೋಗಪಡಿಸಿರುವುದು ಮಾತ್ರವಲ್ಲದೆ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳ ಬಗ್ಗೆ ಇತರರಿಗೆ ಬೊಗಳೆ ಬಿಡುವುದು ಕೇವಲ ಢಂಭಾಚಾರವಾಗಿದೆ. ಇಂತಹವರನ್ನು ಮುಂದಿನ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿ ಜಾತ್ಯತೀತ ಶಕ್ತಿಗಳನ್ನು ಗೆಲ್ಲಿಸಲು ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ CPIM ನಾಯಕರಾದ ಪ್ರದೀಪ್, ಇಕ್ಬಾಲ್,ಪ್ರಶಾಂತ್ ಎಂ ಬಿ, ರಾಜೇಶ್ ,CITU ನಾಯಕರಾದ ಮಲ್ಲೇಶ್,ಪ್ರಕಾಶ್,DYFI ನಾಯಕರಾದ ಸುಕೇಶ್, ಪ್ರಶಾಂತ್ ಆಚಾರ್ಯ, ಹರಿಣಾಕ್ಷಿ,ದಲಿತ ಹಕ್ಕುಗಳ ಸಮಿತಿ ನಾಯಕರಾದ ರಘುವೀರ್,ನಾಗೇಂದ್ರ ಮುಂತಾದವರು ಉಪಸ್ಥಿತರಿದ್ದರು.