ದ.ಕ. ಮೊಗರವೀರ ಮಹಾಜನ ಸಂಘದಿಂದ ವಿದ್ಯಾರ್ಥಿ ವೇತನ, ಗುರಿಕಾರರಿಗೆ ಗೌರವಧನ ವಿತರಣೆ
ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಮೊಗವೀರ ಭವನದಲ್ಲಿ ಆಯೋಜಿಸಲಾಗಿದ್ದ ಉಪ್ಪಳದಿಂದ ಶಿರೂರುವರೆಗಿನ ಮೊಗವೀರ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಗುರಿಕಾರರಿಗೆ ಗೌರವಧನ ವಿತರಣಾ ಕಾರ್ಯಕ್ರಮವನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಜಿ. ಶಂಕರ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಜೀಣೋದ್ಧಾರ ಸಂದರ್ಭ ಸಮಾಜದ ವಿದ್ಯಾರ್ಥಿಗಳಿಗೆ 50 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡುವ ಗುರಿಯನ್ನು ಇರಿಸಿಕೊಳ್ಳಲಾಗಿತ್ತು. ತಾಯಿ ಮಹಾಲಕ್ಷ್ಮೀಯ ಆಶೀರ್ವಾದದಿಂದ ಗುರಿ ಈಡೇರಿದ್ದು ಪ್ರಥಮ ಹಂತದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದ್ದು ಮುಂದೆ ನೀಟ್, ಸಿಇಟಿ ಪರೀಕ್ಷೆ ಬರೆದು ಸೀಟ್ ಹಂಚಿಕೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಗುವುದು. ಬಡತನ ಮತ್ತು ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.
2021-22ರ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಉತ್ತೀರ್ಣರಾದ 175 ವಿದ್ಯಾರ್ಥಿಗಳು ಹಾಗೂ 75 ಪದವಿ ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ಪ್ರವೇಶಾತಿಗಾಗಿ ನೀಟ್, ಸಿಇಟಿ ಪರೀಕ್ಷೆ ಬರೆದು ಕಾಲೇಜುಗಳಲ್ಲಿ ಸೀಟ್ ಹಂಚಿಕೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತಲಾ 25 ಸಾವಿರದಂತೆ 25 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗುವುದು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶ್ರಾವ್ಯ ಎಸ್. ಪುತ್ರನ್, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಿರಾಲ್ ಸುಂದರ್ ಎರ್ಮಾಳ್, ಮಂಗಳೂರು ವಿವಿ ಎಂಕಾಂ ಮೂರನೇ ರ್ಯಾಂಕ್ ಗಳಿಸಿದ ಶ್ರಾವ್ಯ ಡಿ. ಪುತ್ರನ್, ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರವೀಣ್‍ರಾಜ್ ಅವರನ್ನು ಸನ್ಮಾನಿಸಲಾಯಿತು. ಮೊಗವೀರ ಸಮುದಾಯದ ಉಪ್ಪಳದಿಂದ ಶೀರೂರುವರೆಗಿನ ಬಗ್ವಾಡಿ ಹೋಬಳಿಯ 175, ಬಾರ್ಕೂರು ಹೋಬಳಿಯ 80 ಮತ್ತು ಉಚ್ಚಿಲ ಮತ್ತು ಮಂಗಳೂರು ಹೋಬಳಿಯ 79 ಮಂದಿ ಸೇರಿದಂತೆ 334 ಮಂದಿ ಗುರಿಕಾರರಿಗೆ ತಲಾ 5 ಸಾವಿರ ರೂ. ಗಳಂತೆ ಗೌರವಧನ ವಿತರಿಸಲಾಯಿತು.
ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಬಗ್ವಾಡಿ ಹೋಬಳಿ ಶಾಖೆ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಬಾರ್ಕೂರು ಹೋಬಳಿ ಶಾಖೆ ಅಧ್ಯಕ್ಷ ಸತೀಶ್ ಅಮೀನ್, ಮೊಗವೀರ ಮಹಿಳಾ ಮಹಾಜನ ಸಂಘದ ಪೂರ್ಣಿಮಾ ಚಂದ್ರಶೇಖರ್, ಮೊಗವೀರ ಯುವ ಸಂಘಟನೆ ಅಧ್ಯಕ್ಷ ರಾಜೇಂದ್ರ ಹಿರಿಯಡಕ, ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್ ಮೋಹನ್ ಕರ್ಕೇರ ತೋನ್ಸೆ, ಭರತ್ ಕುಮಾರ್ ಎರ್ಮಾಳ್, ಸತೀಶ್ ಅಮೀನ್ ಪಡುಕೆರೆ ಮೊದಲಾದವರು ಉಪಸ್ಥಿತರಿದ್ದರು.